ಬಿಲ್ಕಿಸ್ ಬಾನು ಪ್ರಕರಣ: ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಅ.9ಕ್ಕೆ

Update: 2023-10-06 15:00 GMT

 ಬಿಲ್ಕಿಸ್ ಬಾನು | Photo: PTI

ಹೊಸದಿಲ್ಲಿ : ಸರ್ವೋಚ್ಚ ನ್ಯಾಯಾಲಯವು 2002ರ ಗುಜರಾತ್ ಗಲಭೆಗಳ ಸಂದರ್ಭ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ ಏಳು ಜನರ ಹತ್ಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಪರಿಗಣನೆಗೆ ವಿಚಾರಣೆಯನ್ನು ಅ.9ರಂದು ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ತಮ್ಮ ಲಿಖಿತ ಸಂಕ್ಷಿಪ್ತ ಪ್ರತಿವಾದಗಳನ್ನು ಸಲ್ಲಿಸುವಂತೆ ಬಾನು ಸೇರಿದಂತೆ ಅರ್ಜಿದಾರರಿಗೆ ಸೂಚಿಸಿತು.
ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಇಡೀ ಪ್ರಕರಣವನ್ನು ಪುನಃ ತೆರೆಯಲು ತನಗೆ ಇಷ್ಟವಿಲ್ಲ ಎಂದು ಒತ್ತಿ ಹೇಳಿದ ಸರ್ವೋಚ್ಚ ನ್ಯಾಯಾಲಯವು, ಅರ್ಜಿದಾರರ ಲಿಖಿತ ಪ್ರತಿವಾದಗಳ ಸಂಕ್ಷಿಪ್ತ ಸಾರಾಂಶವನ್ನು ಸಲ್ಲಿಸುವಂತೆ ಅವರ ಪರ ವಕೀಲರಿಗೆ ಸೂಚಿಸಿತು.
ಸುದ್ದಿಸಂಸ್ಥೆಯು ವರದಿ ಮಾಡಿರುವಂತೆ ಅ.9ರಂದು ನಡೆಯಲಿರುವ ವಿಚಾರಣೆಯು ಅಪರಾಧಿಗಳ ಹಣೆಬರಹವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಗಲಿದೆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯವು ಪ್ರಕರಣವನ್ನು ಆವರಿಸಿಕೊಂಡಿರುವ ಕಾನೂನು ತೊಡಕುಗಳನ್ನು ಬೆಟ್ಟು ಮಾಡಿ, ದೋಷಿಗಳು ಶಿಕ್ಷೆಯಲ್ಲಿ ವಿನಾಯಿತಿಯನ್ನು ಪಡೆಯಲು ಮೂಲಭೂತ ಹಕ್ಕನ್ನು ಹೊಂದಿದ್ದಾರೆಯೇ ಎಂದು ಪ್ರಶ್ನಿಸಿತ್ತು. ಎಲ್ಲ ಕೈದಿಗಳಿಗೆ ಸಮಾನ ವಿನಾಯಿತಿಯನ್ನು ನೀಡುವುದರ ಮಹತ್ವಕ್ಕೂ ನ್ಯಾಯಾಲಯವು ಒತ್ತು ನೀಡಿತ್ತು.
ಗಮನಾರ್ಹವಾಗಿ,ಈ ದೋಷಿಗಳ ಬಿಡುಗಡೆಯನ್ನು ಪ್ರಶ್ನಿಸಿರುವುದು ಬಾನು ಅರ್ಜಿಗೆ ಸೀಮಿತವಾಗಿಲ್ಲ. ಸಿಪಿಎಂ ನಾಯಕಿ ಸುಭಾಷಿಣಿ ಅಲಿ,ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್,ಲಕ್ನೋ ವಿವಿಯ ಮಾಜಿ ಕುಲಪತಿ ರೂಪರೇಖಾ ವರ್ಮಾ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳು ದೋಷಿಗಳ ಅವಧಿಪೂರ್ವ ಬಿಡುಗಡೆಯ ನ್ಯಾಯಪರತೆ ಮತ್ತು ಕಾನೂನುಬದ್ಧತೆಯ ಕುರಿತು ಸಾಮೂಹಿಕ ಪ್ರಶ್ನೆಗಳನ್ನೆತ್ತಿವೆ.
Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News