ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡದಿದ್ದರೆ ಅಪೋಲೊ ಆಸ್ಪತ್ರೆಯನ್ನು ವಶಪಡಿಸಿಕೊಳ್ಳಲು ಏಮ್ಸ್‌ಗೆ ಸೂಚಿಸುವುದಾಗಿ ಸುಪ್ರೀಂ ಎಚ್ಚರಿಕೆ

ಸುಪ್ರೀಂ | PTI
ಹೊಸದಿಲ್ಲಿ: ದಿಲ್ಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯು ತನ್ನ ಲೀಸ್ ಒಪ್ಪಂದದಲ್ಲಿ ಬಡರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ತನ್ನ ಬದ್ಧತೆಯನ್ನು ಪೂರೈಸದಿದ್ದರೆ ಅದರ ನಿರ್ವಹಣೆಯನ್ನು ವಹಿಸಿಕೊಳ್ಳುವಂತೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಗೆ ಸೂಚಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಎಚ್ಚರಿಕೆ ನೀಡಿದೆ.
ಕೇವಲ ಒಂದು ರೂ. ಸಾಂಕೇತಿಕ ಭೋಗ್ಯದಲ್ಲಿ ನೀಡಲಾಗಿರುವ 15 ಎಕರೆ ಜಮೀನಿನಲ್ಲಿ ಅಪೋಲೊ ಆಸ್ಪತ್ರೆಯು ನಿರ್ಮಾಣಗೊಂಡಿದ್ದು,ಅದು ಬಡವರಿಗೆ ಉಚಿತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಲೀಸ್ ಒಪ್ಪಂದದಲ್ಲಿ ಷರತ್ತನ್ನು ವಿಧಿಸಲಾಗಿದೆ.
ಮಂಗಳವಾರ ವಿಚಾರಣೆ ಸಂದರ್ಭ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್.ಕೆ.ಸಿಂಗ್ ಅವರ ಪೀಠವು,ಆಸ್ಪತ್ರೆಯಲ್ಲಿ ಬಡಜನರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆಯೇ ಅಥವಾ ಖಾಸಗಿ ಹಿತಾಸಕ್ತಿಗಾಗಿ ಈ ಭೂಮಿಯನ್ನು ಕಬಳಿಸಲಾಗಿದೆಯೇ ಎನ್ನುವುದನ್ನು ಕಂಡುಕೊಳ್ಳಲು ಜಂಟಿ ಸಮಿತಿಯನ್ನು ರಚಿಸುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಗಳಿಗೆ ಆದೇಶವನ್ನೂ ಹೊರಡಿಸಿತು.
ಉನ್ನತ ಮಟ್ಟದಲ್ಲಿ ವಿಷಯವನ್ನು ಚರ್ಚಿಸುವಂತೆ ಕೇಂದ್ರ ಮತ್ತು ದಿಲ್ಲಿ ಸರಕಾರಗಳಿಗೆ ಸೂಚಿಸಿದ ಪೀಠವು ‘ಅಗತ್ಯವಾದರೆ ಅಪೋಲೊ ಆಸ್ಪತ್ರೆಯನ್ನು ನಿರ್ವಹಿಸುವಂತೆ ನಾವು ಏಮ್ಸ್‌ಗೆ ಸೂಚಿಸುತ್ತೇವೆ ’ ಎಂದು ತಿಳಿಸಿತು.
ಪೀಠವು,ತನ್ನ ನಿಲುವನ್ನು ವಿವರಿಸಿ ಅಫಿಡವಿಟ್ ಸಲ್ಲಿಸಲು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಗೆ ನಾಲ್ಕು ವಾರಗಳ ಸಮಯಾವಕಾಶವನ್ನು ನೀಡಿತು. ಕಳೆದ ಐದು ವರ್ಷಗಳಲ್ಲಿ ರಾಜ್ಯ ಸರಕಾರದ ಅಧಿಕಾರಿಗಳ ಶಿಫಾರಸಿನ ಮೇರೆಗೆ ಎಷ್ಟು ಒಳರೋಗಿಗಳಿಗೆ ಮತ್ತು ಹೊರರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸಲಾಗಿದೆ ಎಂಬ ವಿವರಗಳನ್ನು ಅಫಿಡವಿಟ್ ಹೊಂದಿರಬೇಕು ಎಂದು ಅದು ತಾಕೀತು ಮಾಡಿತು.
ಆಸ್ಪತ್ರೆಯನ್ನು ನಡೆಸುತ್ತಿರುವ ಇಂದ್ರಪ್ರಸ್ಥ ಮೆಡಿಕಲ್ ಕಾರ್ಪೊರೇಷನ್ ಲಿ.ದಿಲ್ಲಿ ಉಚ್ಚ ನ್ಯಾಯಾಲಯದ 2009ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
ಲೀಸ್ ಒಪ್ಪಂದದ ಪ್ರಕಾರ ಇಂದ್ರಪ್ರಸ್ಥ ಮೆಡಿಕಲ್ ಕಾರ್ಪೊರೇಷನ್ ಲಿ.ತನ್ನ ಒಟ್ಟು 600 ಹಾಸಿಗೆಗಳ ಸಾಮರ್ಥ್ಯದ ಕನಿಷ್ಠ ಮೂರನೇ ಒಂದು ಭಾಗಕ್ಕೆ ಉಚಿತ ರೋಗನಿರ್ಣಯ ಸೌಲಭ್ಯಗಳು ಮತ್ತು ಇತರ ಅಗತ್ಯ ಆರೈಕೆಯನ್ನು ಒದಗಿಸಬೇಕಿತ್ತು.
ಇದರ ಜೊತೆಗೆ ಆಸ್ಪತ್ರೆಯು ತನ್ನ ಹೊರರೋಗಿ ವಿಭಾಗದಲ್ಲಿ ಶೇ.40ರಷ್ಟು ರೋಗಿಗಳಿಗೆ ಉಚಿತ ವೈದ್ಯಕೀಯ ರೋಗನಿರ್ಣಯ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿದೆ.
ಒಪ್ಪಂದದಲ್ಲಿಯ ಈ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಕೀಲರ ಒಕ್ಕೂಟವು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿತ್ತು.
ಉಚ್ಚ ನ್ಯಾಯಾಲಯವು ತನ್ನ 2009,ಸೆ.2ರ ಆದೇಶದಲ್ಲಿ,ಒಳರೋಗಿಗಳು ಮತ್ತು ಹೊರರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವ ಷರತ್ತುಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಹೇಳಿತ್ತು.
ಸಾಮರ್ಥ್ಯದ ಮೂರನೇ ಒಂದು ಭಾಗದಷ್ಟು,ಅಂದರೆ 200 ಹಾಸಿಗೆಗಳನ್ನು ಸಾಕಷ್ಟು ಸ್ಥಳಾವಕಾಶ ಮತ್ತು ಅಗತ್ಯ ಸೌಲಭ್ಯಗಳೊಂದಿಗೆ ಒಳರೋಗಿಗಳಿಗೆ ಒದಗಿಸುವಂತೆ ಮತ್ತು ಶೇ.40ರಷ್ಟು ಹೊರರೋಗಿಗಳಿಗೆ ಉಚಿತ ಸೌಲಭ್ಯಗಳಿಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಉಚ್ಚ ನ್ಯಾಯಾಲಯವು ಅಪೋಲೊ ಆಸ್ಪತ್ರೆಗೆ ಆದೇಶಿಸಿತ್ತು.
ಮಂಗಳವಾರ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು, ಆಸ್ಪತ್ರೆಯನ್ನು ‘ಲಾಭವೂ ಇಲ್ಲ ನಷ್ಟವೂ ಇಲ್ಲ’ ಸೂತ್ರದ ಪ್ರಕಾರ ನಡೆಸಬೇಕಿತ್ತು. ಆದರೆ ಅದಕ್ಕೆ ಬದಲಾಗಿ ಅದನ್ನು ಸಂಪೂರ್ಣವಾಗಿ ವಾಣಿಜ್ಯ ಉದ್ಯಮವಾಗಿ ಪರಿವರ್ತಿಸಲಾಗಿದ್ದು,ಬಡವರಿಗೆ ಉಚಿತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಬೆಟ್ಟು ಮಾಡಿತು.
ಆಸ್ಪತ್ರೆಯನ್ನು ಜಂಟಿ ಉದ್ಯಮವಾಗಿ ನಡೆಸಲಾಗುತ್ತಿದ್ದು,ದಿಲ್ಲಿ ಸರಕಾರವೂ ಅದರಲ್ಲಿ ಶೇ.26ರಷ್ಟು ಪಾಲು ಬಂಡವಾಳವನ್ನು ಹೊಂದಿದೆ ಎಂದು ಇಂದ್ರಪ್ರಸ್ಥ ಮೆಡಿಕಲ್ ಕಾರ್ಪೊರೇಷನ್ ಲಿ.ಪರ ವಕೀಲರು ಪೀಠಕ್ಕೆ ತಿಳಿಸಿದರು. ’
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸೂರ್ಯಕಾಂತ,ದಿಲ್ಲಿ ಸರಕಾರವು ಬಡರೋಗಿಗಳ ಕಾಳಜಿಯನ್ನು ವಹಿಸುವ ಬದಲು ಆಸ್ಪತ್ರೆಯಿಂದ ಲಾಭವನ್ನು ಗಳಿಸುತ್ತಿದ್ದರೆ ಅದು ಅತ್ಯಂತ ದುರದೃಷ್ಟಕರ ವಿಷಯವಾಗಿದೆ ಎಂದು ಕುಟುಕಿದರು.
ಆಸ್ಪತ್ರೆಯನ್ನು ನಿರ್ಮಿಸಲಾಗಿರುವ ಜಮೀನನ್ನು 30 ವರ್ಷಗಳಿಗೆ ಭೋಗ್ಯಕ್ಕೆ ನೀಡಲಾಗಿತ್ತು ಮತ್ತು ಭೋಗ್ಯದ ಅವಧಿಯು 2023ರಲ್ಲಿಯೇ ಅಂತ್ಯಗೊಂಡಿದೆ ಎಂದು ಬೆಟ್ಟು ಮಾಡಿದ ಸರ್ವೋಚ್ಚ ನ್ಯಾಯಾಲಯವು,ಒಪ್ಪಂದವನ್ನು ನವೀಕರಿಸಲಾಗಿದೆಯೇ ಎನ್ನುವುದನ್ನು ಕಂಡುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತು. ಒಪ್ಪಂದವನ್ನು ನವೀಕರಿಸಲಾಗಿರದಿದ್ದರೆ ಸರಕಾರಿ ಭೂಮಿಯನ್ನು ಮರುವಶಪಡಿಸಿಕೊಳ್ಳಲು ಯಾವ ಕಾನೂನುಬದ್ಧ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂಬ ವಿವರವನ್ನು ನೀಡುವಂತೆಯೂ ಪೀಠವು ಕೇಂದ್ರಕ್ಕೆ ಸೂಚಿಸಿತು.