ಮಣಿಪುರ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟಿನ ಆರು ಪ್ರಶ್ನೆಗಳು: ನಾಳೆಯೊಳಗೆ ಉತ್ತರಿಸುವಂತೆ ಸೂಚನೆ

Update: 2023-07-31 12:28 GMT

ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರ ಮೇಲಿನ ಅಮಾನುಷ ದೌರ್ಜನ್ಯ ಹಾಗೂ ನಗ್ನ ಮೆರವಣಿಗೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಕೆಲವು ಪ್ರಶ್ನೆಗಳನ್ನು ಕೇಂದ್ರದ ಮುಂದಿಟ್ಟಿದೆ.

“ಇಂತಹ ಘಟನೆ ಇಲ್ಲಿ ನಡೆಯಿತು, ಅಲ್ಲಿ ನಡೆಯಿತು ಎಂದು ಹೇಳಿಕೊಂಡು ಮಣಿಪುರದಲ್ಲಿ ನಡೆದಿರುವುದನ್ನು ಸಮರ್ಥಿಸಲಾಗುವುದಿಲ್ಲ,” ಎಂದು ಮುಖ್ಯ ನ್ಯಾಯಮೂರ್ತಿ ಖಾರವಾಗಿ ಪ್ರತಿಕ್ರಿಯಿಸಿದರು. ಪಶ್ಚಿಮ ಬಂಗಾಳದಲ್ಲಿ ಪಂಚಾಯತ್‌ ಚುನಾವಣೆ ಸಂದರ್ಭ ಇತ್ತೀಚೆಗೆ ನಡೆದ ಹಿಂಸೆಯನ್ನು ವಕೀಲರೊಬ್ಬರು ಉಲ್ಲೇಖಿಸಿದಾಗ ಮುಖ್ಯ ನ್ಯಾಯಮೂರ್ತಿ ಮೇಲಿನಂತೆ ಪ್ರತಿಕ್ರಿಯಿಸಿದರು.

ಆರು ಅಂಶಗಳ ಪ್ರಶ್ನೆಯನ್ನು ಮುಂದಿಟ್ಟ ಮುಖ್ಯ ನ್ಯಾಯಮೂರ್ತಿ ಕೇಂದ್ರ ಮತ್ತು ಮಣಿಪುರ ಸರ್ಕಾರಗಳಿಂದ 24 ಗಂಟೆಗಳೊಳಗೆ ಉತ್ತರ ಕೇಳಿದ್ದಾರೆ.

“ಮಹಿಳೆಯರ ವಿರುದ್ಧದ ಅಪರಾಧಗಳು ಎಲ್ಲಾ ಕಡೆ ನಡೆಯುತ್ತಿದೆ ಎಂದು ಹೇಳಿ ಕೂತಿರಲು ಸಾಧ್ಯವಿಲ್ಲ. ದೇಶದ ಇತರೆಡೆಗಳಲ್ಲೂ ಅಂತಹುದೇ ಘಟನೆಗಳು ನಡೆಯುತ್ತಿವೆ ಎಂದು ಹೇಳಿಕೊಂಡು ಮಣಿಪುರ ಘಟನೆಯಿಂದ ತಪ್ಪಿಸುವ ಹಾಗಿಲ್ಲ. ಪ್ರಶ್ನೆಯೇನೆಂದರೆ ಮಣಿಪುರ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು? ಅದನ್ನು ಹೇಳಿ… ದೇಶದ ಎಲ್ಲಾ ಪುತ್ರಿಯರನ್ನೂ ರಕ್ಷಿಸಿ ಅಥವಾ ಯಾರನ್ನೂ ರಕ್ಷಿಸಬೇಡಿ ಅನ್ನುತ್ತಿದ್ದೀರಾ?” ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು. ವಕೀಲ ಬಾನ್ಸುರಿ ಸ್ವರಾಜ್‌ ಅವರು ಪ ಬಂಗಾಳ, ರಾಜಸ್ತಾನ, ಛತ್ತೀಸಗಢದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರ ಎತ್ತಿದಾಗ ಸಿಜೆಐ ಮೇಲಿನಂತೆ ಹೇಳಿದರು.

“ನಾವು ಅಭೂತಪೂರ್ವ ಸ್ವರೂಪದ ವಿಚಾರವನ್ನು ನಿಭಾಯಿಸುತ್ತಿದ್ದೇವೆ,” ಎಂದು ಸಿಜೆಐ ಹೇಳಿದರು.

ಸಂತ್ರಸ್ತೆಯರಿಗೆ ತನಿಖೆ ಮೇಲೆ ವಿಶ್ವಾಸವಿರಬೇಕಿದೆ ಎಂದು ಅವರ ಪರ ವಕೀಲರು ಹೇಳಿದಾಗ ಸರ್ಕಾರದ ಪರ ವಕೀಲರು, ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯ ತನಿಖೆಗೆ ಅಭ್ಯಂತರವಿಲ್ಲ ಎಂದು ಹೇಳಿದೆ.

ಆರು ಪ್ರಶ್ನೆಗಳಿಗೆ ನಾಳೆಯೊಳಗೆ ಉತ್ತರಿಸಬೇಕೆಂದು ಮಣಿಪುರ ಸರ್ಕಾರ ಮತ್ತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಹೇಳಿದೆ. ಆ ಪ್ರಶ್ನೆಗಳು ಇಂತಿವೆ.

1.ಪ್ರಕರಣಗಳ ವಿವರ

2.ಎಷ್ಟು ಶೂನ್ಯ ಎಫ್‌ಐಆರ್‌ಗಳು

3.ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಎಷ್ಟು ಪ್ರಕರಣಗಳನ್ನು ವರ್ಗಾಯಿಸಲಾಗಿದೆ.

4.ಎಷ್ಟು ಮಂದಿಯನ್ನು ಇಲ್ಲಿಯ ತನಕ ಬಂಧಿಸಲಾಗಿದೆ

5. ಬಂಧಿತ ಆರೋಪಿಗಳಿಗೆ ಕಾನೂನು ನೆರವು ಒದಗಿಸುವ ಕುರಿತು ಮಾಹಿತಿ

6. ಎಷ್ಟು ಸೆಕ್ಷನ್‌ 164 ಹೇಳಿಕೆಗಳನ್ನು (ಹತ್ತಿರದ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆಗಳು) ಇಲ್ಲಿಯವರೆಗೆ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News