ಸೂರತ್ | ಯೂಟ್ಯೂಬ್ ಪತ್ರಕರ್ತನನ್ನು ಇರಿದು ಕೊಂದ ಅಪ್ರಾಪ್ತ ವಯಸ್ಕರು
ಗಾಂಧಿನಗರ : ಯೂಟ್ಯೂಬ್‌ನಲ್ಲಿ ‘ಫ್ರಂಟ್‌ಲೈನ್ ಸೂರತ್’ ಸುದ್ದಿ ವೆಬ್‌ಸೈಟ್‌ಗಾಗಿ ಕೆಲಸ ಮಾಡುತ್ತಿದ್ದ ವರದಿಗಾರರೊಬ್ಬರನ್ನು ಮೂವರು ಅಪ್ರಾಪ್ತ ವಯಸ್ಕರು ಮತ್ತು ಒಬ್ಬ 18 ವರ್ಷದ ವ್ಯಕ್ತಿ ಇರಿದು ಕೊಂದು ಪರಾರಿಯಾಗಿದ್ದಾರೆ.
ಸೂರತ್ನ ಅಂಜಾನ ನಿವಾಸಿ ಝುಬೇರ್ ಪಠಾಣ್ (36) ಮೃತಪಟ್ಟವರು. ಅವರು ಕಳೆದ ಕೆಲವು ವರ್ಷಗಳಿಂದ ಯೂಟ್ಯೂಬ್ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.
ರವಿವಾರ ತಡ ರಾತ್ರಿ, ಪಠಾಣ್ ತನ್ನ ಮನೆ ಸಮೀಪದ ತನ್ನ ಕಚೇರಿಯಲ್ಲಿ ಇದ್ದರು. ಅವರ ಜೊತೆಗೆ ಅವರ ಸ್ನೇಹಿತ ತೌಸಿಫ್ ಶೇಖ್ ಇದ್ದರು. ಆಗ ನಾಲ್ವರು ಪಠಾಣ್ ಮೇಲೆ ದಾಳಿ ನಡೆಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅವರ ಸ್ನೇಹಿತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
‘‘ತಮ್ಮ ಮನೆಯ ಎದುರುಗಡೆ ಇರುವ ಬೆಂಚ್‌ನಲ್ಲಿ ಕುಳಿತುಕೊಳ್ಳಬಾರದು ಎಂಬುದಾಗಿ ಪಠಾಣ್ ಹಲವು ಬಾರಿ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದರು. ಅದಕ್ಕಾಗಿ ಅವರನ್ನು ಕೊಲ್ಲಲು ಆರೋಪಿಗಳು ಯೋಜನೆ ಹಾಕಿಕೊಂಡಿದ್ದರು. ಆರೋಪಿಗಳನ್ನು ಪತ್ತೆಹಚ್ಚಲು ನಾವು ಹಲವು ತಂಡಗಳನ್ನು ಕಳುಹಿಸಿದ್ದೇವೆ’’ ಎಂದು ಸಲಬತ್‌ಪುರ ಪೊಲೀಸ್ ಇನ್ಸ್ಪೆಕ್ಟರ್ ಕೆ.ಡಿ. ಜಡೇಜ ತಿಳಿಸಿದರು.