ನಿಫಾ ಸೋಂಕಿನ ಲಕ್ಷಣ ; ಯುವಕ ಆಸ್ಪತ್ರೆಗೆ ದಾಖಲು
ಕೋಲ್ಕತಾ: ಇತ್ತೀಚೆಗೆ ಕೇರಳದಿಂದ ಹಿಂದಿರುಗಿದ ಯುವಕನೋರ್ವ ನಿಫಾ ಸೋಂಕಿನ ಲಕ್ಷಣಗಳೊಂದಿಗೆ ಕೋಲ್ಕತ್ತಾದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಕೇರಳದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಬರ್ದವಾನ್ ಜಿಲ್ಲೆಯ ಈ ಯುವಕ ತೀವ್ರ ಜ್ವರ, ವಾಂತಿ ಹಾಗೂ ಗಂಟಲು ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
20 ವರ್ಷದ ಯುವಕನಿಗೆ ನಿಫಾ ಸೋಂಕನ್ನು ದೃಢಪಡಿಸಲು ಅಗತ್ಯವಿರುವ ಪರೀಕ್ಷೆಗಳನ್ನು ಇದುವರೆಗೆ ನಡೆಸಿಲ್ಲ ಎಂದು ಅವರ ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ‘‘ನಿಫಾ ಸೋಂಕಿನ ಹಲವು ಪ್ರಕರಣಗಳು ವರದಿಯಾಗಿರುವ ಕೇರಳದಿಂದ ಈ ಯುವಕ ಹಿಂದಿರುಗಿದ್ದಾನೆ. ಆದುದರಿಂದ ನಾವು ತೀವ್ರ ಮುನ್ನೆಚ್ಚರಿಕೆ ವಹಿಸಿದ್ದೇವೆ. ವೈದ್ಯರು ಅವರ ಮೇಲೆ ನಿಗಾ ಇರಿಸಿದ್ದಾರೆ’’ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ತೀವ್ರ ಜ್ವರದ ಹಿನ್ನೆಲೆಯಲ್ಲಿ ಯುವಕ ಎರ್ನಾಕುಳಂನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಂದು ಅವರು ತಿಳಿಸಿದ್ದಾರೆ. ‘‘ಅಲ್ಲಿನ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಆತ ಪಶ್ಚಿಮಬಂಗಾಳಕ್ಕೆ ಹಿಂದಿರುಗಿದ. ಆದರೆ, ಎರಡೇ ದಿನಗಳಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾದ. ಮೊದಲು ಆತನನ್ನು ನ್ಯಾಶನಲ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಅನಂತರ ಬೆಲಿಘಾಟಾ ಐಡಿ ಆಸ್ಪತ್ರೆಗೆ ದಾಖಲಿಸಲಾಯಿತು’’ ಎಂದು ಅವರು ತಿಳಿಸಿದ್ದಾರೆ.