ದಿಲ್ಲಿಯಲ್ಲಿ ಚಂದ್ರಬಾಬು ನಾಯ್ಡು, ಅಮಿತ್ ಶಾ ಜೊತೆ ಮಾತುಕತೆ

Update: 2024-07-17 15:42 GMT

 ಅಮಿತ್ ಶಾ , ಚಂದ್ರಬಾಬು ನಾಯ್ಡು | PTI 

ಹೊಸದಿಲ್ಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಮಂಗಳವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ತನ್ನ ರಾಜ್ಯದ ಆರ್ಥಿಕ ಸವಾಲುಗಳನ್ನು ನಿಭಾಯಿಸಲು ಕೇಂದ್ರ ಬಜೆಟ್ ನಲ್ಲಿ ಗಣನೀಯ ಪ್ರಮಾಣದ ಅನುದಾನವನ್ನುವಿತರಿಸುವಂತೆ ಆಗ್ರಹಿಸಿದರು.

2014ರಲ್ಲಿ ಆಂಧ್ರಪ್ರದೇಶವು ವಿಭಜನೆಯಾದ ಬಳಿಕ ಅನ್ಯಾಯಕ್ಕೊಳಗಾಗಿದ್ದು, ಹಿಂದಿನ ಸರಕಾರದ ದುರಾಡಳಿತದ ಪರಿಣಾಮವನ್ನು ಅನುಭವಿಸುತ್ತಿದೆ ಎಂದು ಶಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಹೇಳಿದರು.

ಎರಡು ದಿನಗಳ ಭೇಟಿಗಾಗಿ ದಿಲ್ಲಿಗೆ ಆಗಮಿಸಿದ ನಾಯ್ಡು ಅವರು ಬುಧವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದು, ರಾಜ್ಯದ ಆರ್ಥಿಕ ಅಗತ್ಯಗಳ ಬಗ್ಗೆ ಚರ್ಚಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಕೂಡಾ ಅವರು ಭೇಟಿಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿಯು ಅತ್ಯಂತ ಕಳವಳಕಾರಿಯಾಗಿದೆ. 2019-20 ರ ಸಾಲಿನಲ್ಲಿ ಸಾರ್ವಜನಿಕ ಸಾಲವು ಒಟ್ಟು ರಾಜ್ಯ ಆಂತರಿಕ ಉತ್ಪನ್ನ (ಜಿಎಸ್ಡಿಪಿ)ವು 31.02 ಶೇಕಡ ಇದ್ದುದು, 2023-24ರ ಸಾಲಿನಲ್ಲಿ 33.32 ಶೇಕಡಕ್ಕೇರಿದೆ. ಇದು ರಾಜ್ಯದ ಆರ್ಥಿಕ ಪರಿಸ್ಥಿತಿಯು ಕಳೆದ ಐದು ವರ್ಷಗಳಲ್ಲಿ ಹದಗೆಟ್ಟಿರುವುದನ್ನು ಸೂಚಿಸುತ್ತದೆ ಎಂದರು.

ಸುಮಾರು ಹದಿನೈದು ದಿನಗಳಲ್ಲಿ ನಾಯ್ಡು ಅವರು ದಿಲ್ಲಿಗೆ ಕೈಗೊಂಡ ಎರಡನೆ ಪ್ರವಾಸ ಇದಾಗಿದೆ. ಜುಲೈ 4ರಂದು ಪ್ರಧಾನಿಯನ್ನು ಭೇಟಿಯಾಗಿದ್ದ ಅವರು ತನ್ನ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಏಳು ಅಂಶಗಳ ಕಾರ್ಯಸೂಚಿಯನ್ನು ಸಲ್ಲಿಸಿದರು.

ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಇನ್ನೊಂದು ಪ್ರಮುಖ ಪಾಲುದಾರ ಪಕ್ಷವಾದ ಜೆಡಿಯುವಿನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ಸೋಮವಾರ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮುಂಬರುವ ಬಜೆಟ್ ನಲ್ಲಿ ಬಿಹಾರ ರಾಜ್ಯಕ್ಕೆ ಅಧಿಕ ಅನುದಾನ ನೀಡುವಂತೆ ಕೋರಿದ್ದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಕೂಡಾ ದಿಲ್ಲೆಗೆ ಭೇಟಿ ನೀಡಿದ್ದಾರೆ.

ಟಿಡಿಪಿ ಹಾಗೂ ಜೆಡಿಯು ಪಕ್ಷಗಳು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಪ್ರಮುಖ ಪಾಲುದಾರ ಪಕ್ಷಗಳಾಗಿದ್ದು,ಕೇಂದ್ರ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News