ತಮಿಳುನಾಡು | ವಸ್ತು ಸಂಗ್ರಹಾಲಯದಲ್ಲಿ ಗಾಂಧೀಜಿ ಗೌರವಾರ್ಥ ಕಾರ್ಯಕ್ರಮ ; ರಾಜ್ಯಪಾಲರಿಂದ ಸಿಎಂ ಸ್ಟಾಲಿನ್ ಟೀಕೆ

Update: 2025-01-30 20:37 IST
M.K.Stalin, R.N.Ravi

ಎಂ.ಕೆ.ಸ್ಟಾಲಿನ್ ,  ಆರ್.ಎನ್.ರವಿ | PTI 

  • whatsapp icon

ಚೆನ್ನೈ: ಮಹಾತ್ಮಾ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮವನ್ನು ನಗರದಲ್ಲಿಯ ವಸ್ತುಸಂಗ್ರಹಾಲಯದ ಮೂಲೆಯಲ್ಲಿ ನಡೆಸಿದ್ದಕ್ಕಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು, ರಾಷ್ಟ್ರಪಿತನ ಜೀವಿತಾವಧಿಯಲ್ಲಿ ದ್ರಾವಿಡ ಸಿದ್ಧಾಂತದ ಅನುಯಾಯಿಗಳು ಅವರನ್ನು ವಿರೋಧಿಸಿದ್ದರು ಮತ್ತು ಅಪಹಾಸ್ಯ ಮಾಡಿದ್ದರು ಎಂದು ಆರೋಪಿಸಿದರು.

ರವಿ ಮತ್ತು ಸ್ಟಾಲಿನ್ ಅವರು ಗಾಂಧಿಯವರ 77ನೇ ಪುಣ್ಯತಿಥಿಯಂದು ಅನುಕ್ರಮವಾಗಿ ಗಾಂಧಿ ಮಂಡಪಮ್ ಮತ್ತು ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ಅವರಿಗೆ ಪುಷ್ಪನಮನಗಳನ್ನು ಸಲ್ಲಿಸಿದರು.

ಹುತಾತ್ಮರ ದಿನದ ಅಂಗವಾಗಿ ಸ್ಟಾಲಿನ್ ರಾಜ್ಯ ಸಚಿವಾಲಯದಲ್ಲಿ ಅಸ್ಪಶ್ಯತೆಯ ವಿರುದ್ಧ ಪ್ರತಿಜ್ಞಾ ವಿಧಿಯನ್ನೂ ಬೋಧಿಸಿದರು. ರಾಜ್ಯದ ಸಚಿವರು,ಹಿರಿಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

‘ಗಾಂಧಿ ಮಂಡಪಮ್ 1956ರಲ್ಲಿ ಕೆ.ಕಾಮರಾಜ ಅವರು ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ವಿಸ್ತಾರವಾದ ಸ್ಥಳದಲ್ಲಿ ನಿರ್ಮಿಸಿದ್ದ ರಾಷ್ಟ್ರಪಿತನ ಭವ್ಯವಾದ ಸ್ಮಾರಕವಾಗಿದೆ. ಗಾಂಧಿ ಸ್ಮರಣಾರ್ಥ ಅವರ ಜಯಂತಿ ಮತ್ತು ಹುತಾತ್ಮ ದಿನ ಕಾರ್ಯಕ್ರಮಗಳನ್ನು ನಗರದ ವಸ್ತು ಸಂಗ್ರಹಾಲಯದ ಮೂಲೆಯಲ್ಲಿ ನಡೆಸುವುದಕ್ಕೆ ಏನಾದರೂ ಅರ್ಥವಿದೆಯೇ?’ ಎಂದು ರವಿ ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

‘ರಾಷ್ಟ್ರಪಿತನಿಗೆ ಸೂಕ್ತ ಗೌರವವನ್ನು ಸಲ್ಲಿಸುವಂತೆ ಮತ್ತು ಇಂತಹ ಕಾರ್ಯಕ್ರಮಗಳನ್ನು ಗಾಂಧಿ ಮಂಡಪಮ್‌ನಲ್ಲಿ ಸೂಕ್ತ ರೀತಿಯಲ್ಲಿ ನಡೆಸುವಂತೆ ನಾನು ಮುಖ್ಯಮಂತ್ರಿಗಳಿಗೆ ಪದೇ ಪದೇ ಮಾಡಿಕೊಂಡಿದ್ದ ಮನವಿಗಳನ್ನು ಪಟ್ಟು ಹಿಡಿದು ನಿರಾಕರಿಸಲಾಗಿದೆ. ಗಾಂಧೀಜಿಯವರ ಜೀವಿತಾವಧಿಯಲ್ಲಿ ದ್ರಾವಿಡ ಸಿದ್ಧಾಂತದ ಅನುಯಾಯಿಗಳು ಅವರನ್ನು ಬಲವಾಗಿ ವಿರೋಧಿಸಿದ್ದರು ಮತ್ತು ಅಪಹಾಸ್ಯ ಮಾಡಿದ್ದರು. ಆದರೆ ಮುಖ್ಯಮಂತ್ರಿಗಳು ಅಪಹಾಸ್ಯವನ್ನು ಈಗಲೂ ಮುಂದುವರಿಸಬೇಕೇ?’ ಎಂದೂ ರವಿ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News