ತಮಿಳುನಾಡು: ಕೆ.ಅಣ್ಣಾಮಲೈ, ತಮಿಳಿಸೈ ಅವರನ್ನು ಟೀಕಿಸಿದ ಇಬ್ಬರು ನಾಯಕರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಿದ ಬಿಜೆಪಿ

Update: 2024-06-20 06:05 GMT

ಚೆನ್ನೈ: ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ.ಅಣ್ಣಾಮಲೈ ಹಾಗೂ ಹಿರಿಯ ನಾಯಕಿ ತಮಿಳಿಸೈ ಸೌಂದರ್ ರಾಜನ್ ಅವರನ್ನು ಬಹಿರಂಗವಾಗಿ ಟೀಕಿಸುವ ಮೂಲಕ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಆರೋಪದಲ್ಲಿ ಇಬ್ಬರು ತಮಿಳುನಾಡು ನಾಯಕರನ್ನು ಅವರ ಪಕ್ಷದ ಜವಾಬ್ದಾರಿಗಳಿಂದ ಬಿಜೆಪಿ ಮುಕ್ತಗೊಳಿಸಿದೆ.

ತಮಿಳುನಾಡು ಬಿಜೆಪಿ ಚಿಂತಕರ ಚಾವಡಿಯ ಭಾಗವಾಗಿದ್ದ ಕಲ್ಯಾಣ್ ರಾಮನ್ ಅವರನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಹಾಗೂ ಅವರನ್ನು ಪಕ್ಷದಿಂದ ಒಂದು ವರ್ಷ ಕಾಲ ಅಮಾನತುಗೊಳಿಸಲಾಗಿದೆ.

ಇದೇ ರೀತಿ, ತಮಿಳುನಾಡು ಬಿಜೆಪಿ ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ತ್ರಿಚಿ ಸೂರಿಯಾರನ್ನೂ ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ.

ಈ ಇಬ್ಬರು ನಾಯಕರು ಪಕ್ಷದ ಶಿಸ್ತನ್ನು ಉಲ್ಲಂಘಿಸುವ ಮೂಲಕ, ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಹೇಳಿದೆ.

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ, ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್ ರಾಮನ್ ಅವರು ಕೆ.ಅಣ್ಣಾಮಲೈ ಅವರ ನಾಯಕತ್ವ ಹಾಗೂ ಅವರ ವಾರ್ ರೂಂ ಅನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಅವರು ಅಣ್ಣಾಮಲೈ ಅವರ ಕಾರ್ಯವೈಖರಿಯನ್ನು ಬಹಿರಂಗವಾಗಿಯೇ ಪ್ರಶ್ನಿರಸುತ್ತಿದ್ದಾರೆ.

ಇದೇ ರೀತಿ ಇತ್ತೀಚೆಗಿನ ತಮ್ಮ ಸಂದರ್ಶನಗಳಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕಿ ತಮಿಳಿಸೈ ಸೌಂದರ್ ರಾಜನ್ ಅವರನ್ನು ತ್ರಿಚಿ ಸೂರಿಯ ಟೀಕಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News