ನೀಟ್ ರದ್ದುಗೊಳಿಸುವ ಮಸೂದೆಗೆ ಶೀಘ್ರ ಒಪ್ಪಿಗೆ ನೀಡಲು ರಾಷ್ಟ್ರಪತಿಗೆ ತಮಿಳುನಾಡು ಸಿಎಂ ಆಗ್ರಹ
ಚೆನ್ನೈ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು ರದ್ದುಗೊಳಿಸುವ ರಾಜ್ಯದ ಮಸೂದೆಗೆ ಶೀಘ್ರ ಒಪ್ಪಿಗೆ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶುಕ್ರವಾರ ಇಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಗ್ರಹಿಸಿದರು. ಸ್ನಾತಕ ವೈದ್ಯಕೀಯ ಪದವಿ ಕೋರ್ಸ್‌ಗಳ ಮಸೂದೆ, 2021 ರಾಷ್ಟ್ರಪತಿಗಳ ಅಂಕಿತಕ್ಕಾಗಿ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಕಾಯುತ್ತಿದೆ.
ಚೆನ್ನೈಗೆ ಭೇಟಿಯ ಬಳಿಕ ರಾಷ್ಟ್ರಪತಿಗಳು ಶುಕ್ರವಾರ ದಿಲ್ಲಿಗೆ ನಿರ್ಗಮಿಸುವ ಮುನ್ನ ಅವರನ್ನು ಖುದ್ದಾಗಿ ಭೇಟಿಯಾದ ಸ್ಟಾಲಿನ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
‘ನೀಟ್ ಆಧಾರಿತ ವೈದ್ಯಕೀಯ ಆಯ್ಕೆ ಪ್ರಕ್ರಿಯೆಯು ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳ ವಿರುದ್ಧವಾಗಿದೆ ಎಂಬ ಅಂಶವನ್ನು ಪರಿಗಣಿಸಿ ತಮಿಳುನಾಡು ಸರಕಾರವು +2 ಅಂಕಗಳ ಮೂಲಕ ಎಂಬಿಬಿಎಸ್ ಆಯ್ಕೆ ಪ್ರಕ್ರಿಯೆಯನ್ನು ಆಯ್ದುಕೊಂಡಿದೆ. ಈ ಪದ್ಧತಿಯು ಹಿಂದೆ ನಮ್ಮ ರಾಜ್ಯದ ಹಿತಾಸಕ್ತಿಗಳಿಗೆ ಪೂರಕವಾಗಿತ್ತು, ಆದರೆ ಕೇಂದ್ರ ಸರಕಾರವು ನೀಟ್‌ನ್ನು ಪರಿಚಯಿಸಿದ್ದರಿಂದ ಮತ್ತು ಕೇಂದ್ರ ಶಾಸನಗಳಲ್ಲಿ ನಂತರದ ಬದಲಾವಣೆಗಳಿಂದ ಅದನ್ನು ಸ್ಥಗಿತಗೊಳಿಸಬೇಕಾಯಿತು’ ಎಂದು ತನ್ನ ಪತ್ರದಲ್ಲಿ ತಿಳಿಸಿರುವ ಸ್ಟಾಲಿನ್, ಈ ಸಮಸ್ಯೆಯನ್ನು ಬಗೆಹರಿಸಲು ತಮಿಳುನಾಡು ವಿಧಾನಸಭೆಯು 2021,ಸೆ.13ರಂದು ‘ತಮಿಳುನಾಡು ಸ್ನಾತಕ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶ ಮಸೂದೆ,2021ನ್ನು ಅಂಗೀಕರಿಸಿತ್ತು ಮತ್ತು ಸೆ.18ರಂದು ತಮಿಳುನಾಡು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ ರಾಜ್ಯಪಾಲರು ಐದು ತಿಂಗಳುಗಳ ವಿಳಂಬದ ಬಳಿಕ ಮಸೂದೆಯನ್ನು ಮರಳಿಸಿದ್ದರಿಂದ ಮರುಪರಿಶೀಲನೆಯ ಬಳಿಕ 2022, ಫೆ.8ರಂದು ಅದನ್ನು ಮತ್ತೆ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು ಮತ್ತು ರಾಷ್ಟ್ರಪತಿಗಳ ಅಂಕಿತಕ್ಕಾಗಿ ರಾಜ್ಯಪಾಲರಿಗೆ ಮತ್ತೊಮ್ಮೆ ಕಳುಹಿಸಲಾಗಿತ್ತು. ಕೇಂದ್ರ ಗೃಹಸಚಿವಾಲಯವು ಮಸೂದೆಯ ಕುರಿತು ಕೇಳಿದ್ದ ಎಲ್ಲ ಸ್ಪಷ್ಟನೆಗಳನ್ನು ಸಲ್ಲಿಸಲಾಗಿದ್ದರೂ ಈಗಲೂ ಮಸೂದೆಯು ಬಾಕಿಯುಳಿದುಕೊಂಡಿದೆ ಎಂದು ವಿವರಿಸಿದ್ದಾರೆ.
ಮಸೂದೆಗೆ ಒಪ್ಪಿಗೆ ನೀಡುವಲ್ಲಿ ಅತಿಯಾದ ವಿಳಂಬದಿಂದಾಗಿ ದುಬಾರಿ ಕೋಚಿಂಗ್ ಪಡೆಯಲು ಸಾಧ್ಯವಾಗದ ಅನೇಕ ಅರ್ಹ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್‌ಗೆ ಪ್ರವೇಶಾವಕಾಶದಿಂದ ವಂಚಿತರಾಗಿದ್ದಾರೆ ಮತ್ತು ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಟಾಲಿನ್ ತನ್ನ ಪತ್ರದಲ್ಲಿ ರಾಷ್ಟ್ರಪತಿಗಳ ಗಮನ ಸೆಳೆದಿದ್ದಾರೆ.