ತಮಿಳುನಾಡು: ದಲಿತ ವ್ಯಕ್ತಿಯ ಥಳಿಸಿ ಹತ್ಯೆ, ಮತ್ತೆ ಮೂವರ ಬಂಧನ
ಕೃಷ್ಣಗಿರಿ : ಗ್ರಾಮದ ದೇವಾಲಯದಿಂದ ದೇವರ ವಿಗ್ರಹ ಕಳವುಗೈದ ಶಂಕೆಯಲ್ಲಿ ಪ್ರಬಲ ಜಾತಿಗಳ ಜನರ ಗುಂಪಿನಿಂದ ಥಳಿತಕ್ಕೊಳಗಾಗಿ ಶೇಖರ್ (70) ಎಂಬವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಊನಂಪಾಳಂಯನಿಂದ ಮತ್ತೆ ಮೂವರನ್ನು ಉತಂಗರೈಯ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತರನ್ನು ಎಸ್ ಗೋಕುಲ್ (23), ವಿ. ಪೆರುಮಾಳ್ (24) ಹಾಗೂ ಟಿ. ಸುರೇಶ್ (23) ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಮೃತಪಟ್ಟ ಶೇಖರ್ ಅವರ ಪುತ್ರಿ ಪಿ. ಮುರುಗವಲ್ಲಿ (35) ಬಂಧಿತ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಕೋರಿ ಕೃಷ್ಣಗಿರಿ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.
ತನ್ನ ತಾಯಿ ನೀಡಿದ ಮೌಖಿಕ ದೂರನ್ನು ಉತಂಗರೈ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಮುರುಗವಲ್ಲಿ ಆರೋಪಿಸಿದ್ದಾರೆ. ತನ್ನ ತಾಯಿ ಪ್ರಬಲ ಜಾತಿಯ ಜನರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
‘‘ಪ್ರಬಲ ಜಾತಿಗೆ ಸೇರಿದ 15 ಜನರು ಗುಂಪು ನನ್ನ ತಂದೆ ಮೇಲೆ ಹಲ್ಲೆ ನಡೆಸಿತು. ಆದರೆ, ಅವರು ಕೇವಲ ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ ಎಂದು ನಾನು ಪೊಲೀಸರಿಗೆ ತಿಳಿಸಿದ್ದೇನೆ. ಅಲ್ಲದೆ, ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡಬೇಕು’’ ಎಂದು ಅವರು ಹೇಳಿದ್ದಾರೆ.
ಉತಂಗರೈ ಪೊಲೀಸರು ಆಕೆಯ ಆರೋಪವನ್ನು ನಿರಾಕರಿಸಿದ್ದಾರೆ.