ತಮಿಳುನಾಡು ಪಟಾಕಿ ಗೋದಾಮಿನಲ್ಲಿ ಸ್ಫೋಟ: 4 ಸಾವು
Update: 2023-10-05 14:11 GMT
ಚೆನ್ನೈ: ತಮಿಳುನಾಡಿನ ಮೈಲಾಡತುರೈಯಲ್ಲಿರುವ ಪಟಾಕಿ ಗೋದಾಮೊಂದರಲ್ಲಿ ಬುಧವಾರ ಸ್ಫೋಟ ಸಂಭವಿಸಿದ್ದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಸ್ಫೋಟ ಸಂಭವಿಸಿದಾಗ ಈ ಕಾರ್ಮಿಕರು ಪಟಾಕಿಗಳನ್ನು ಪ್ಯಾಕ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಗಾಗಿ ಗೋದಾಮಿನ ಮಾಲೀಕ ಮೋಹನ್ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಫೋಟಕ್ಕೆ ಕಾರಣ ತಕ್ಷಣ ತಿಳಿದುಬಂದಿಲ್ಲ. ಇಂಥದೇ ಘಟನೆಯು ಮಂಗಳವಾರ ವಿರುದುನಗರದಲ್ಲಿ ಸಂಭವಿಸಿತ್ತು. ಅಲ್ಲಿನ ವಿಕ್ಟೋರಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಮುಖ್ಯಮಂತ್ರಿಯಿಂದ 3 ಲಕ್ಷ ರೂ. ಪರಿಹಾರ
ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಉಂಟಾಗಿರುವ ಸಾವು-ನೋವುಗಳ ಬಗ್ಗೆ ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ತಲಾ ಮೂರು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.