ತಮಿಳುನಾಡು: ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಕಾಡುಗಳ್ಳ ವೀರಪ್ಪನ್ ಪುತ್ರಿ
ಚೆನ್ನೈ: ತಮಿಳುನಾಡು ಹಾಗೂ ಕರ್ನಾಟಕದ ಭಾಗಗಳಲ್ಲಿ ಭೀತಿ ಮೂಡಿಸಿದ್ದ ದಂತಚೋರ ವೀರಪ್ಪನ್ ಅವರ ಪುತ್ರಿ ವಿದ್ಯಾರಾಣಿ ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು ನಾಮ್ ತಮಿಳರ್ ಕಚ್ಚಿಯ ಅಭ್ಯರ್ಥಿಯಾಗಿ ಎಪ್ರಿಲ್ 19ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.
ವೃತ್ತಿಯಲ್ಲಿ ವಕೀಲೆಯಾಗಿರುವ ವಿದ್ಯಾ ರಾಣಿ, ಜುಲೈ 2020ರಲ್ಲಿ ಬಿಜೆಪಿಯನ್ನು ಸೇರ್ಪಡೆಯಾಗಿದ್ದರು ಮತ್ತು ಅವರನ್ನು ರಾಜ್ಯ ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಿಸಲಾಗಿತ್ತು. ಆದರೆ, ಕೇಸರಿ ಪಕ್ಷವನ್ನು ತೊರೆದಿದ್ದ ವಿದ್ಯಾ ರಾಣಿ, ಇತ್ತೀಚೆಗೆ ನಟ, ನಿರ್ದೇಶಕ ಸೀಮನ್ ನೇತೃತ್ವದ ನಾಮ್ ತಮಿಳರ್ ಕಚ್ಚಿ ಪಕ್ಷವನ್ನು ಸೇರ್ಪಡೆಯಾಗಿದ್ದರು.
ಸಾರ್ವಜನಿಕ ಸಭೆಯೊಂದರಲ್ಲಿ ತಮಿಳುನಾಡು ಮತ್ತು ಪುದುಚೇರಿಯಿಂದ ಸ್ಪರ್ಧಿಸುತ್ತಿರುವ ಎಲ್ಲ 40 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಸೀಮನ್, “ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ನಾಮ್ ತಮಿಳರ್ ಕಚ್ಚಿ ಪಕ್ಷದ ಅಭ್ಯರ್ಥಿಯಾಗಿ ವಿದ್ಯಾ ರಾಣಿ ಸ್ಪರ್ಧಿಸಲಿದ್ದಾರೆ” ಎಂದು ಪ್ರಕಟಿಸಿದರು.
ಎಲ್ಟಿಟಿಇ ನಾಯಕ ದಿ. ವೇಲುಪಿಳ್ಳೈ ಪ್ರಭಾಕರನ್ ಪರವಾಗಿ ಸಹಾನುಭೂತಿ ಹೊಂದಿರುವ ಹಾಗೂ ವಿವಾದಾತ್ಮಕ ಸೈದ್ಧಾಂತಿಕ ಹೊಂದಿರುವ ನಾಮ್ ತಮಿಳರ್ ಕಚ್ಚಿ ಪಕ್ಷದಿಂದ ಸ್ಪರ್ಧಿಸುತ್ತಿರುವ 40 ಮಂದಿ ಅಭ್ಯರ್ಥಿಗಳ ಪೈಕಿ ಅರ್ಧದಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ.