ತಮಿಳುನಾಡು ಸಚಿವ ಬಾಲಾಜಿಯ ಈಡಿ ಬಂಧನ ಕಾನೂನುಬದ್ಧ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ, ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿಯನ್ನು ಅನುಷ್ಠಾನ ನಿರ್ದೇಶನಾಲಯ (ಈಡಿ) ಬಂಧಿಸಿರುವುದು ಕಾನೂನುಬದ್ಧವಾಗಿಯೇ ಇದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ಎಮ್.ಎಮ್. ಸುಂದರೇಶ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವೊಂದು, ಬಾಲಾಜಿಯನ್ನು ಆಗಸ್ಟ್ 12ರವರೆಗೆ ಕಸ್ಟಡಿಗೆ ತೆಗೆದುಕೊಳ್ಳಲು ಅನುಷ್ಠಾನ ನಿರ್ದೇಶನಾಲಯಕ್ಕೆ ಅನುಮತಿ ನೀಡಿತು.
ತನ್ನ ಸಹಾಯಕರು ಶಿಫಾರಸು ಮಾಡಿರುವ ಅಭ್ಯರ್ಥಿಗಳ ನೇಮಕಾತಿಗಾಗಿ, ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಪಿತೂರಿ ನಡೆಸಿದ ಆರೋಪದಲ್ಲಿ ಬಾಲಾಜಿಯನ್ನು ಜೂನ್ 14ರಂದು ಅನುಷ್ಠಾನ ನಿರ್ದೇಶನಾಲಯವು ಬಂಧಿಸಿತ್ತು. ಉದ್ಯೋಗಕ್ಕೆ ಪ್ರತಿಯಾಗಿ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಲಂಚವನ್ನು ಪಡೆಯಲಾಗಿತ್ತು ಎಂದು ಅದು ಆರೋಪಿಸಿತ್ತು.
ತನ್ನ ಬಂಧನವನ್ನು ಬಾಲಾಜಿ ಮದರಾಸು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಜುಲೈ 14ರಂದು ಹೈಕೋರ್ಟ್ ಅನುಷ್ಠಾನ ನಿರ್ದೇಶನಾಲಯದ ಪರವಾಗಿ ತೀರ್ಪು ನೀಡಿತ್ತು.
ಬಳಿಕ, ಮದರಾಸು ಹೈಕೋರ್ಟ್ ತೀರ್ಪನ್ನು ಸಚಿವ ಮತ್ತು ಅವರ ಪತ್ನಿ ಎರಡು ಪತ್ಯೇಕ ಅರ್ಜಿಗಳಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ, ಬಂಧನದ ಕಾನೂನುಬದ್ಧತೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು. ಅದೇ ವೇಳೆ, ಪೊಲೀಸ್ ಕಸ್ಟಡಿಯ ಅವಧಿಯನ್ನು ಆರಂಭದ 15 ದಿನಗಳಿಗಿಂತ ವಿಸ್ತರಿಸಬಹುದೇ ಎಂಬ ಪ್ರಶ್ನೆಯನ್ನು ವಿಸ್ತೃತ ಪೀಠವೊಂದಕ್ಕೆ ವರ್ಗಾಯಿಸಿತು.