ಪೋಷಕರ ಅನುಮತಿ ಇಲ್ಲದೇ ವಿವಾಹಕ್ಕೆ ನಿರಾಕರಣೆ: ಶಾಲೆಯಲ್ಲೇ ಶಿಕ್ಷಕಿ ಹತ್ಯೆ

Update: 2024-11-21 02:33 GMT

ಸಾಂದರ್ಭಿಕ ಚಿತ್ರ (PTI) 

ತಂಜಾವೂರು: ಪೋಷಕರ ಒಪ್ಪಿಗೆ ಇಲ್ಲದೇ ವಿವಾಹವಾಗುವುದಿಲ್ಲ ಎಂದು ನಿರಾಕರಿಸಿದ ಶಿಕ್ಷಕಿಯನ್ನು ಪ್ರಿಯಕರ ಶಾಲಾ ಆವರಣದಲ್ಲೇ ಇರಿದು ಹತ್ಯೆ ಮಾಡಿದ ಪ್ರಕರಣ ವರದಿಯಾಗಿದೆ.

ತಂಜಾವೂರಿನ ಮಲ್ಲಿಪಟ್ಟಣಂ ಸರ್ಕಾರಿ ಉನ್ನತ ಸೆಕೆಂಡರಿ ಶಾಲೆಯಲ್ಲಿ ತಮಿಳು ಭಾಷೆ ಬೋಧಿಸುತ್ತಿದ್ದ ಎಂ.ರಮಣಿ (26) ಹತ್ಯೆಗೀಡಾದ ಶಿಕ್ಷಕಿ. ಆಕೆಯ ಪ್ರಿಯಕರ ಪಿ.ಮದನ್ (28) ಶಾಲೆಯ ಸ್ಟಾಫ್ ರೂಮ್ನಲ್ಲಿ ಬೆಳಿಗ್ಗೆ 10ರ ಸುಮಾರಿಗೆ ಈ ಕೃತ್ಯ ಎಸಗಿದ್ದಾನೆ. ಸಹೋದ್ಯೋಗಿ ಶಿಕ್ಷಕರು ತಕ್ಷಣ ಗಾಯಾಳು ಶಿಕ್ಷಕಿಯನ್ನು ಆಸ್ಪತ್ರೆಗೆ ಸಾಗಿಸಿದರೂ, ದಾರಿಮಧ್ಯದಲ್ಲೇ ಆಕೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಮೃತ ಶಿಕ್ಷಕಿಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಸಾರ್ವಜನಿಕ ಪರಿಹಾರ ನಿಧಿಯಿಂದ ಘೋಷಿಸಿದ್ದಾರೆ. ಸೇತುಭವಚತಿರಂ ಬ್ಲಾಕ್ನ ಚಿನ್ನಮಣಿ ಎಂಬ ಗ್ರಾಮದವರಾದ ಮದನ್ ಹಾಗೂ ರಮಣಿ ಪರಸ್ಪರ ಪ್ರೀತಿಸುತ್ತಿದ್ದರು. ಆತನ ಕುಟುಂಬದವರು ಇತ್ತೀಚೆಗೆ ರಮಣಿ ಕುಟುಂಬದವರನ್ನು ಭೇಟಿ ಮಾಡಿ ವಿವಾಹ ಸಂಬಂಧ ಏರ್ಪಡಿಸುವ ಪ್ರಸ್ತಾವ ಮುಂದಿಟ್ಟಿದ್ದರು. ಆದರೆ ರಮಣಿ ಕುಟುಂಬದವರು ಇದಕ್ಕೆ ಆಸಕ್ತಿ ತೋರಿರಲಿಲ್ಲ.

ಬುಧವಾರ ಮದನ್ ಸ್ಟಾಫ್ರೂಂನ ಎದುರು ರಮಣಿಯವರನ್ನು ಭೇಟಿ ಮಾಡಿ ಆಕೆಯ ಜತೆ ಮಾತನಾಡಲು ಬಯಸಿದ. ಆದರೆ ಆಕೆ ನಿರಾಕರಿಸಿದಳು ಎನ್ನಲಾಗಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು, ಒಂದು ಹಂತದಲ್ಲಿ ಆತ ಚಾಕು ತೆಗೆದು ಆಕೆಯ ಕುತ್ತಿಗೆಗೆ ಇರಿದು ಪಲಾಯನ ಮಾಡಿದ ಎಂದು ಪೊಲೀಸರು ವಿವರಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಸಚಿವ ಅಂಬಿಲ್ ಮಹೇಶ್ ಪೊಯ್ಯಮೋಳಿ ಶಾಲೆಗೆ ರಜೆ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News