ಎನ್ ಡಿಎ ಸಂಚಾಲಕ ಹುದ್ದೆಗೂ ಟಿಡಿಪಿ ಪಟ್ಟು? ; ಬಿಜೆಪಿಗೆ ಅತೃಪ್ತಿ

Update: 2024-06-06 16:27 GMT

ನಿತೀಶ್ ಕುಮಾರ್ , ನರೇಂದ್ರ ಮೋದಿ , ಚಂದ್ರಬಾಬು ನಾಯ್ಡು | PC : PTI 

ಹೊಸದಿಲ್ಲಿ: ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (NDA)ನ ಸಂಚಾಲಕ ಹುದ್ದೆಯನ್ನು ತನಗೆ ನೀಡಬೇಕು ಎಂಬ ಬೇಡಿಕೆಯನ್ನು ಅದರ ಘಟಕ ಪಕ್ಷ ತೆಲುಗು ದೇಶಂ ಪಕ್ಷ (TDP) ಮುಂದಿಟ್ಟಿದೆ ಎನ್ನಲಾಗಿದ್ದು, ಅದು ಬಿಜೆಪಿಯ ಅತೃಪ್ತಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತ ಊಹಾಪೋಹಗಳು ಬುಧವಾರ ಸಂಜೆಯಿಂದ ರಾಷ್ಟ್ರ ರಾಜಧಾನಿಯ ರಾಜಕೀಯ ವಲಯಗಳಲ್ಲಿ ಕೇಳಿಬರುತ್ತಿವೆ.

‘‘ತನಗೆ ಎನ್ ಡಿಎ ಸಂಚಾಲಕ ಹುದ್ದೆಯನ್ನು ನೀಡಬೇಕು ಎಂಬ ಬೇಡಿಕೆಯನ್ನು ಟಿಡಿಪಿ ಮುಂದಿಟ್ಟಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಆ ವರದಿಗಳು ಸರಿಯಿರುವಂತೆ ಅನಿಸುತ್ತಿಲ್ಲ. ವರದಿಗಳು ಪರಿಶೀಲಿತ ವಾಸ್ತವಾಂಶದ ಬದಲು ಮೂಲಗಳನ್ನು ಆಧರಿಸಿವೆ. ಟಿಡಿಪಿಯು ಒಂದೋ ಲೋಕಸಭಾ ಸ್ಪೀಕರ್ ಹುದ್ದೆ ಅಥವಾ ಎನ್ ಡಿಎ ಸಂಚಾಲಕ ಹುದ್ದೆಗೆ ಬೇಡಿಕೆ ಇಡಬೇಕು. ನಾಳೆ ನಡೆಯುವ ಎನ್ ಡಿಎ ಸಂಸದೀಯ ಪಕ್ಷದ ಸಭೆಗೆ ಮುನ್ನ ಮಿತ್ರಪಕ್ಷಗಳ ಪ್ರತಿಯೊಂದು ಸಂಭಾವ್ಯ ಬೇಡಿಕೆಯನ್ನು ನಮ್ಮ ಪಕ್ಷದ ನಾಯಕತ್ವ ವಿಶ್ಲೇಷಿಸುತ್ತದೆ’’ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದರು.

ಅದೇ ವೇಳೆ, ಸಮ್ಮಿಶ್ರ ಸರಕಾರದ ಸಚಿವ ಸಂಪುಟದಲ್ಲಿ ಸಿಗಬೇಕಾಗಿರುವ ಸ್ಥಾನಗಳ ಬಗ್ಗೆ ಟಿಡಿಪಿ ಮತ್ತು ಜೆಡಿಯು ಮುಂದಿಟ್ಟಿದೆ ಎನ್ನಲಾಗಿರುವ ಬೇಡಿಕೆಗಳ ಕುರಿತ ಸುದ್ದಿಗಳೂ ಬಿಜೆಪಿ ವಲಯದಲ್ಲಿ ಆತಂಕ ಹುಟ್ಟಿಸಿವೆ ಎನ್ನಲಾಗಿದೆ. ಸರಕಾರ ರಚನೆಗೆ ಮುನ್ನ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಸಲು ನಿಯೋಜಿಸಲ್ಪಟ್ಟಿರುವ ಹಿರಿಯ ನಾಯಕರು ಇತರ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಸಚಿವ ಸಂಪುಟದಲ್ಲಿ ಮಿತ್ರ ಪಕ್ಷಗಳ ಪಾಲು ಮತ್ತು ಪಕ್ಷದಿಂದ ಸಚಿವ ಸಂಪುಟಕ್ಕೆ ಯಾರನ್ನು ಆಯ್ಕೆ ಮಾಡಬೇಕು ಮುಂತಾದ ವಿಷಯದಲ್ಲಿ ಚರ್ಚೆ ನಡೆಯಿತು ಎನ್ನಲಾಗಿದೆ.

ಟಿಡಿಪಿಯು ಲೋಕಸಭಾ ಸ್ಪೀಕರ್ ಮತ್ತು ಎನ್ ಡಿಎ ಸಂಚಾಲಕ- ಈ ಎರಡೂ ಹುದ್ದೆಗಳಿಗೆ ಬೇಡಿಕೆ ಸಲ್ಲಿಸಿದರೆ, ಅದಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News