ನಿದ್ರೆಗೆ ತೊಂದರೆ ನೀಡಿದರೆಂದು ವಿದ್ಯಾರ್ಥಿಗಳನ್ನು ಥಳಿಸಿದ ಶಿಕ್ಷಕ ಅಮಾನತು
ಜೈಸ್ಮಲೇರ್: ತನ್ನ ನಿದ್ರೆಗೆ ತೊಂದರೆ ನೀಡಿದರೆಂದು ಶಿಕ್ಷಕರೊಬ್ಬರು 26 ವಿದ್ಯಾರ್ಥಿಗಳನ್ನು ಕೋಲಿನಿಂದ ಥಳಿಸಿರುವ ಘಟನೆ ಬಾರ್ಮರ್ ಜಿಲ್ಲೆಯ ರಾವತ್ಸರ್ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದ್ದು, ಶಿಕ್ಷಕ ದಾದು ರಾಮ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಘಟನೆಯು ಶನಿವಾರ ನಡೆದಿದ್ದು, ವಿದ್ಯಾರ್ಥಿಗಳು ಅಳುತ್ತಿರುವ 30 ಸೆಕೆಂಡ್ ಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ರವಿವಾರ ಹಂಚಿಕೆಯಾದ ನಂತರ ಈ ವಿಚಾರವು ಪ್ರಾಧಿಕಾರಗಳ ಗಮನಕ್ಕೆ ಬಂದಿದೆ. ವಿಡಿಯೊದಲ್ಲಿ ವಿವಿಧ ತರಗತಿಗಳಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಜೋರಾಗಿ ಅಳುತ್ತಿರುವ ದೃಶ್ಯ ಸೆರೆಯಾಗಿದೆ.
ತರಗತಿಯ ಸಮಯದಲ್ಲಿ ಶಿಕ್ಷಕನು ನಿದ್ರಿಸುತ್ತಿದ್ದು, ಈ ಸಂದರ್ಭದಲ್ಲಿ ತರಗತಿಯ ಹೊರಗೆ ಆಡುತ್ತಿದ್ದ ವಿದ್ಯಾರ್ಥಿಗಳಿಂದ ಅವರ ನಿದ್ರೆಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ. ಇದರಿಂದ ಕುಪಿತಗೊಂಡಿರುವ ಶಿಕ್ಷಕನು ಕೋಲಿನಲ್ಲಿ ಸುಮಾರು 26 ವಿದ್ಯಾರ್ಥಿಗಳನ್ನು ಮನ ಬಂದಂತೆ ಥಳಿಸಿದ್ದಾರೆ. ಇದರಿಂದ ಮಕ್ಕಳು ಅಳುತ್ತಿರುವ ಹಾಗೂ ಬಿಕ್ಕಳಿಸುತ್ತಿರುವ ಸದ್ದು ಶಾಲೆಯ ಹೊರಗೆ ಹಾದು ಹೋಗುತ್ತಿರುವ ಜನರಿಗೂ ಕೇಳಿಸಿದೆ.
ಕೆಲವು ಜನರು ಶಾಲೆಯ ಒಳಗೆ ಹೋಗಿ, ಮಕ್ಕಳ ಮೈಮೇಲಿನ ಗಾಯದ ಗುರುತುಗಳನ್ನು ಕಂಡಿದ್ದಾರೆ. ನಂತರ ಅವರು ಆ ದೃಶ್ಯವನ್ನು ವಿಡಿಯೊ ಮಾಡಿಕೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.