ಶಿಕ್ಷಕನ ಹತ್ಯೆ ಪ್ರಕರಣ: ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ

Update: 2023-10-27 16:33 GMT

ಮಾಜಿ ಶಾಸಕ ಮುಖ್ತಾರ್ ಅನ್ಸಾರಿ Photo- PTI

ಲಕ್ನೋ: 13 ವರ್ಷಗಳಷ್ಟು ಹಳೆಯದಾದ ಗ್ಯಾಂಗ್‌ಸ್ಟರ್ ಕಾಯ್ದೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಹಾಗೂ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ ಗಾಝಿಪುರದ ಜನಪ್ರತಿನಿಧಿಗಳ ನ್ಯಾಯಾಲಯವು ಶುಕ್ರವಾರ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.

2009ರಲ್ಲಿ ಗಾಝಿಪುರದ ಕರಾಂಡಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶಿಕ್ಷಕ ಕಪಿಲದೇವ್ ಸಿಂಗ್ ಹತ್ಯೆಯ ಬಳಿಕ 2010ರಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣ ಮತ್ತು ಪ್ರತ್ಯೇಕ ಕೊಲೆ ಯತ್ನ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಅನ್ಸಾರಿಗೆ ಐದು ಲಕ್ಷ ರೂ.ಗಳ ದಂಡವನ್ನೂ ವಿಧಿಸಿದೆ. ಅನ್ಸಾರಿಯ ನಿಕಟ ಸಹಚರ ಸೋನು ಯಾದವ್‌ಗೆ ಐದು ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು ಎರಡು ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ.

ಇದು ಪ್ರಸ್ತುತ ಬಂಡಾ ಜೈಲಿನಲ್ಲಿರುವ ಅನ್ಸಾರಿ ವಿರುದ್ಧ ಕಳೆದ 13 ತಿಂಗಳುಗಳಲ್ಲಿ ಆರನೇ ದೋಷನಿರ್ಣಯವಾಗಿದೆ.

ಐದು ಸಲ ಶಾಸಕರಾಗಿದ್ದ ಅನ್ಸಾರಿ ವಿರುದ್ಧ ಕೊಲೆ,ಅಪಹರಣ,ಸುಲಿಗೆ, ಬೆದರಿಕೆ,ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಸೇರಿದಂತೆ 60ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿವೆ.

ಕಪಿಲದೇವ್ ಸಿಂಗ್ ಸಬುವಾ ನಿವಾಸಿಯಾಗಿದ್ದರು. 2009ರಲ್ಲಿ ಅವರ ಹತ್ಯೆ ಮತ್ತು ಮೀರ್ ಹಸನ್ ಕೊಲೆಯತ್ನದ ಬಳಿಕ ಪೋಲಿಸರು ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು ಎಂದು ಸರಕಾರಿ ವಕೀಲ ನೀರಜ ಶ್ರೀವಾಸ್ತವ ತಿಳಿಸಿದರು.

ಮಾಜಿ ಕಾಂಗ್ರಸ್ ಶಾಸಕ ಹಾಗೂ ಹಾಲಿ ಉ.ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ ರಾಯ್ ಅವರ ಸೋದರ ಅವಧೇಶ ರಾಯ್ ಹತ್ಯೆ ಪ್ರಕರಣದಲ್ಲಿ ವಾರಣಾಸಿ ಜನಪ್ರತಿನಿಧಿಗಳ ನ್ಯಾಯಾಲಯವು ಈ ವರ್ಷದ ಜೂ.5ರಂದು ಅನ್ಸಾರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತ್ತು.

2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್ ಹತ್ಯೆ ಮತ್ತು 1997ರಲ್ಲಿ ಬಿಜೆಪಿ ನಾಯಕ ಕಿಶೋರ ರುಂಗ್ಟಾ ಅಪಹರಣ-ಹತ್ಯೆಗೆ ಸಂಬಂಧಿಸಿದಂತೆ 2007ರಲ್ಲಿ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಗಾಝಿಪುರ ಜನಪ್ರತಿನಿಧಿಗಳ ನ್ಯಾಯಾಲಯವು 2023,ಎ.29ರಂದು ಅನ್ಸಾರಿಗೆ 10 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು ಐದು ಲ.ರೂ.ಗಳ ದಂಡವನ್ನು ವಿಧಿಸಿತ್ತು. ಅನ್ಸಾರಿಯ ಸೋದರ ಅಫ್ಝಲ್ ಅನ್ಸಾರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲ.ರೂ.ದಂಡವನ್ನು ವಿಧಿಸಲಾಗಿತ್ತು.

ಕಳೆದ 13 ತಿಂಗಳುಗಳಲ್ಲಿ ಅನ್ಸಾರಿ ವಿರುದ್ಧ ಮೊದಲ ದೋಷನಿರ್ಣಯವನ್ನು ಪ್ರಕಟಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯವು 2003ರಲ್ಲಿ ಲಕ್ನೋ ಜಿಲ್ಲಾ ಕಾರಾಗೃಹದ ಜೈಲರ್‌ಗೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಏಳು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. ಎರಡನೇ ದೋಷನಿರ್ಣಯ ಪ್ರಕರಣದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ಅನ್ಸಾರಿಗೆ ಎರಡು ವರ್ಷಗಳ ಜೈಲುಶಿಕ್ಷೆ ಮತ್ತು 10,000 ರೂ.ದಂಡವನ್ನು ವಿಧಿಸಿದ್ದರೆ,ಮೂರನೇ ಪ್ರಕರಣದಲ್ಲಿ ಗಾಝಿಪುರದ ಸ್ಥಳೀಯ ನ್ಯಾಯಾಲಯವು 10 ವರ್ಷಗಳ ಜೈಲುಶಿಕ್ಷೆ ಮತ್ತು ಐದು ಲ.ರೂ.ದಂಡವನ್ನು ವಿಧಿಸಿತ್ತು.

1993ರಲ್ಲಿ ಟಾಡಾ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ 2003,ಫೆ.4ರಂದು ದಿಲ್ಲಿ ನ್ಯಾಯಾಲಯವು ಮೊದಲ ಬಾರಿಗೆ ಅನ್ಸಾರಿಯನ್ನು ದೋಷಿ ಎಂದು ಘೋಷಿಸಿ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. 2005ರಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ತಳ್ಳಿ ಹಾಕಿ ಅನ್ಸಾರಿಯನ್ನು ಖಲಾಸೆಗೊಳಿಸಿತ್ತು.

ಉ.ಪ್ರ.ಪೊಲೀಸರು ತಿಳಿಸಿರುವಂತೆ ಈವರೆಗೆ ಅನ್ಸಾರಿ ಮತ್ತು ಸಹಚರರಿಗೆ ಸೇರಿದ 300 ಕೋ.ರೂ.ಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News