2-3 ದಿನಗಳಲ್ಲಿ ಉತ್ತರ ಭಾರತದಲ್ಲಿ ತಾಪಮಾನ ಕ್ರಮೇಣ ಕಡಿಮೆಯಾಗಲಿದೆ : ಐಎಂಡಿ
ಹೊಸದಿಲ್ಲಿ : ಉತ್ತರ,ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ತೀವ್ರಗೊಂಡಿರುವ ತಾಪಮಾನವು ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಕ್ರಮೇಣ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಶುಕ್ರವಾರ ತಿಳಿಸಿದೆ.
ಭಾರತವು ಬಿರುಬಿಸಿಲಿನ ತಾಪದಿಂದ ತಲ್ಲಣಿಸಿದ್ದು,ಮೇ ತಿಂಗಳಿನಲ್ಲಿ ಹಲವಾರು ದಿನಗಳಿಂದ ಅನೇಕ ರಾಜ್ಯಗಳು ಬಿಸಿಗಾಳಿಯನ್ನು ಅನುಭವಿಸುತ್ತಿವೆ. ಹರ್ಯಾಣ, ಚಂಡಿಗಡ, ದಿಲ್ಲಿ ಮತ್ತು ರಾಜಸ್ಥಾನಗಳಲ್ಲಿ ಮೇ 17ರಿಂದ ಬಿಸಿಗಾಳಿ ತೀವ್ರಗೊಂಡಿದ್ದು,ಮೇ 18ರಿಂದ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಇದೇ ಸ್ಥಿತಿಯಿದೆ.
ವಾಯುವ್ಯ ಭಾರತದ ಹಲವಾರು ಭಾಗಗಳಲ್ಲಿ ಹಾಗೂ ಮಧ್ಯ ಮತ್ತು ಪೂರ್ವ ಭಾರತದ ಅಲ್ಲಲ್ಲಿ ತಾಪಮಾನ ಸಾಮಾನ್ಯಕ್ಕಿಂತ 3ರಿಂದ 6 ಡಿಗ್ರಿ ಸೆಲ್ಷಿಯಸ್ ಏರಿಕೆಯನ್ನು ದಾಖಲಿಸಿದೆ ಎಂದು ಹೇಳಿರುವ ಐಎಂಡಿ, ಮುಂದಿನ 2-3 ದಿನಗಳಲ್ಲಿ ತಾಪಮಾನ ಕ್ರಮೇಣ ಕಡಿಮೆಯಾಗಲಿದೆ ಮತ್ತು ನಂತರ ಗಮನಾರ್ಹ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಿದೆ.
ಬಿಸಿಗಾಳಿಯಿಂದ ಸಾವುಗಳು
ಬಿಹಾರ ಮತ್ತು ಒಡಿಶಾದಲ್ಲಿ ಕಳೆದ 24 ಗಂಟೆಗಳಲ್ಲಿ ಕನಿಷ್ಠ 24 ಜನರು ಬಿಸಿಲಾಘಾತದಿಂದ ಮೃತಪಟ್ಟಿದ್ದಾರೆ.
ಬಿಹಾರದಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿದಂತೆ 14 ಜನರು ಬಿಸಿಲಿನ ತಾಪದಿಂದ ಮೃತಪಟ್ಟಿದ್ದಾರೆ. ಭೋಜಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಾವುಗಳು ವರದಿಯಾಗಿದ್ದು,ಅಲ್ಲಿ ಐವರು ಚುನಾವಣಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ರೋಹ್ತಾಸ್ನಲ್ಲಿ ಮೂವರು,ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಓರ್ವರು ಚುನಾವಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆಯು ತಿಳಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ನಾಲ್ವರು ಬಿಸಿಲಿಗೆ ಬಲಿಯಾಗಿದ್ದಾರೆ.
ಒಡಿಶಾದ ರೂರ್ಕೇಲಾದ ಸರಕಾರಿ ಆಸ್ಪತ್ರೆಯಲ್ಲಿ ಬಿಸಿಲಾಘಾತದಿಂದ ಹತ್ತು ಸಾವುಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತ ಜಾರ್ಖಂಡ್ನಲ್ಲಿಯೂ ಬಿಸಿಲಿನ ಹೊಡೆತಕ್ಕೆ ಮೂವರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.