ನೀಟ್ ಮರು ಪರೀಕ್ಷೆ ನಡೆಸುವಂತೆ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ : ಮರು ನೀಟ್ ಪರೀಕ್ಷೆ ನಡೆಸಬೇಕು ಎಂದು ಕೋರಿ ವಿದ್ಯಾರ್ಥಿನಿ ಆಯುಶಿ ಪಟೇಲ್ ಸಲ್ಲಿಸಿರುವ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ತನ್ನ ಒಎಮ್‌ಆರ್ ಶೀಟ್ ಹರಿದು ಹೋಗಿತ್ತು ಎಂಬುದಾಗಿ ಅವರು ತನ್ನ ಅರ್ಜಿಯಲ್ಲಿ ಆರೋಪಿಸಿದ್ದರು.
ಅರ್ಜಿದಾರೆಯು ದಾಖಲೆಯನ್ನು ನಕಲಿ ಮಾಡಿದ್ದಾರೆ ಮತ್ತು ಮೂಲ ಒಎಮ್‌ಆರ್ ಶೀಟ್ ಭದ್ರವಾಗಿದೆ ಎನ್ನುವುದನ್ನು ತೋರಿಸುವ ಪುರಾವೆಯನ್ನು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಸಲ್ಲಿಸಿದ ಬಳಿಕ ನ್ಯಾಯಾಲಯವು ಈ ತೀರ್ಪು ನೀಡಿದೆ.
ಸುಳ್ಳು ಹೇಳಿಕೆಗಳನ್ನು ನೀಡಿರುವುದಕ್ಕಾಗಿ ವಿದ್ಯಾರ್ಥಿನಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಎನ್‌ಟಿಎ ಸ್ವತಂತ್ರವಾಗಿದೆ ಎಂಬುದಾಗಿಯೂ ಅಲಹಾಬಾದ್ ಹೈಕೋರ್ಟ್ ಹೇಳಿತು.
ನಿಮ್ಮ ಒಎಮ್‌ಆರ್ ಶೀಟ್ ಹರಿದಿರುವುದರಿಂದ ನಿಮ್ಮ ಫಲಿತಾಂಶವನ್ನು ಘೋಷಿಸುವುದಿಲ್ಲ ಎಂಬ ಸಂದೇಶವೊಂದನ್ನು ಎನ್‌ಟಿಎ ತನಗೆ ಕಳುಹಿಸಿದೆ ಎಂದು ಆಯುಶಿ ಪಟೇಲ್ ಹೇಳಿದದರು. ಬಳಿಕ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಹೇಳಿಕೆಗಳನ್ನು ನೀಡಿದರು. ಆ ಹೇಳಿಕೆಗಳು ವೈರಲ್ ಆದವು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮುಂತಾದ ರಾಜಕೀಯ ನಾಯಕರೂ ಆ ಸಂದೇಶಗಳನ್ನು ಹಂಚಿಕೊಂಡರು.
ತನ್ನ ಒಎಮ್‌ಆರ್ ಶೀಟನ್ನು ಎನ್‌ಟಿಎ ಕೈಯಿಂದ ಮರು ಮೌಲ್ಯಮಾಪನ ಮಾಡಬೇಕು ಎಂದು ಪಟೇಲ್ ಒತ್ತಾಯಿಸಿದ್ದರು. ಅದೂ ಅಲ್ಲದೆ, ಎನ್‌ಟಿಎಯನ್ನು ತನಿಖೆಗೊಳಪಡಿಸಬೇಕು ಮತ್ತು ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ಕೌನ್ಸೆಲಿಂಗ್ ನಿಲ್ಲಿಸಬೇಕು ಎಂಬುದಾಗಿಯೂ ಅವರು ಕೋರಿದ್ದರು.
ತನ್ನ ಒಎಮ್‌ಆರ್ ಶಿಟ್ ಹರಿದಿದ್ದರಿಂದ ಇನ್ನೋರ್ವ ವಿದ್ಯಾರ್ಥಿಯ ಅರ್ಜಿ ಸಂಖ್ಯೆಯ ಆಧಾರದಲ್ಲಿ ಎನ್‌ಟಿಎ ತನಗೆ ಕಳಪೆ ಫಲಿತಾಂಶ ನೀಡಿತ್ತು ಎಂದು ಪಟೇಲ್ ಹೇಳಿಕೊಂಡಿದ್ದರು. ಆದರೆ, ಅವರ ಒಎಮ್‌ಆರ್ ಶೀಟನ್ನು ಎನ್‌ಟಿಎ ಉಪ ನಿರ್ದೇಶಕ ಸಂದೀಪ್ ಶರ್ಮ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.