ನಾಳೆ ಕೇಂದ್ರ ಮಧ್ಯಂತರ ಬಜೆಟ್ ಮಂಡನೆ
ಹೊಸದಿಲ್ಲಿ: ನಾಳೆ ಫೆ.1ರಂದು 2024ನೇ ಸಾಲಿನ ಮಧ್ಯಂತರ ಮುಂಗಡಪತ್ರವನ್ನು ಮಂಡಿಸಲು ಕೇಂದ್ರವು ಸಜ್ಜಾಗಿದ್ದು, ಇದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಆರನೇ ಬಜೆಟ್ ಆಗಿರಲಿದೆ. ಆದರೆ ಇದು ಚುನಾವಣಾ ವರ್ಷವಾಗಿರುವುದರಿಂದ ಲೇಖಾನುದಾನ ಮಾತ್ರವಾಗಿರಲಿದೆ. 2024ರ ಲೋಕಸಭಾ ಚುನಾವಣೆಗಳ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ.
ಬಜೆಟ್ 2024ನ್ನು ಗುರುವಾರ ಪೂರ್ವಾಹ್ನ 11 ಗಂಟೆಗೆ ಪ್ರಕಟಿಸಲಾಗುವುದು. ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಡಿಡಿ ನ್ಯೂಸ್ನಲ್ಲಿ ವೀಕ್ಷಿಸಬಹುದು.
ಮುಂಬರುವ ಬಜೆಟ್ ನಲ್ಲಿ ಯಾವುದೇ ದೊಡ್ಡ ಘೋಷಣೆ ಇರದಿರಬಹುದು ಎಂದು ಸೀತಾರಾಮನ್ ಈ ಮೊದಲು ತಿಳಿಸಿದ್ದರು. ಆದಾಗ್ಯೂ, ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಕಟಣೆಗಳು ಹೊರಬೀಳಬಹುದು ಎಂದು ಮಾಧ್ಯಮ ವರದಿಗಳು ಹೇಳಿವೆ.
ಪಿಎಂ-ಕಿಸಾನ್ ಯೋಜನೆಯಡಿ ರೈತರಿಗೆ ವಿತರಿಸಲಾಗುತ್ತಿರುವ ಮೊತ್ತ 6,000 ರೂ.ಗಳಿಂದ 9,000 ರೂ.ಗಳಿಗೆ ಏರಿಕೆ, ನರೇಗಾ ಯೋಜನೆಗೆ ಹೆಚ್ಚಿನ ಹಂಚಿಕೆ ಮತ್ತು ಆಯುಷ್ಮಾನ್ ಭಾರತ ಯೋಜನೆಯಡಿ ಹೆಚ್ಚಿನ ವಿಮೆ ರಕ್ಷಣೆ ಇವುಗಳಲ್ಲಿ ಸೇರಿವೆ. ಅಲ್ಲದೆ ಬಂಡವಾಳ ವೆಚ್ಚಕ್ಕೆ ಹೆಚ್ಚು ಒತ್ತು ನೀಡಬಹುದು.
ನಿರೀಕ್ಷೆಗಳಲ್ಲಿ ತೆರಿಗೆ ಪರಿಹಾರ ಕ್ರಮಗಳು ಮತ್ತು ಕೃಷಿ ಹಾಗೂ ಗ್ರಾಮೀಣ ಕ್ಷೇತ್ರವನ್ನು ಬೆಂಬಲಿಸಲು ಪ್ರಕಟಣೆಗಳು ಸೇರಿವೆ. ಈ ಕ್ಷೇತ್ರವು ಪ್ರತಿಕೂಲ ಹವಾಮಾನ ಸ್ಥಿತಿಗಳು, ವಾತಾವರಣ ಬದಲಾವಣೆಯ ಪರಿಣಾಮ ಮತ್ತು ಹಣದುಬ್ಬರದ ಒತ್ತಡಗಳ ಸಮಸ್ಯೆಗಳನ್ನು ಎದುರಿಸುತ್ತಿದೆ. ಜೊತೆಗೆ ಬಜೆಟ್ ನಲ್ಲಿ ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಗಮನವನ್ನು ಕೇಂದ್ರೀಕರಿಸಬಹುದು ಎಂದು ಮಾಸ್ಟರ್ ಕ್ಯಾಪಿಟಲ್ ಸರ್ವಿಸಸ್ ನ ನಿರ್ದೇಶಕ ಗುರ್ಮೀತ್ ಸಿಂಗ್ ಚಾವ್ಲಾ ಹೇಳಿದರು.