ವಿಧಾನಸಭೆಯಿಂದ ಏಳು ಬಿಜೆಪಿ ಶಾಸಕರ ಅಮಾನತನ್ನು ತಳ್ಳಿ ಹಾಕಿದ ದಿಲ್ಲಿ ಹೈಕೋರ್ಟ್

Update: 2024-03-06 15:19 GMT

 ದಿಲ್ಲಿ ಉಚ್ಛ ನ್ಯಾಯಾಲಯ | Photo: PTI 

ಹೊಸದಿಲ್ಲಿ : ಬಜೆಟ್ ಅಧಿವೇಶನದ ಆರಂಭದಲ್ಲಿ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ವಿಧಾನಸಭೆಯಿಂದ ಏಳು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದನ್ನು ದಿಲ್ಲಿ ಉಚ್ಛ ನ್ಯಾಯಾಲಯವು ಬುಧವಾರ ತಳ್ಳಿಹಾಕಿದೆ.

ಬಿಜೆಪಿ ಶಾಸಕರಾದ ಮೋಹನ ಸಿಂಗ್ ಬಿಷ್ಟ, ಅಜಯ ಮಹಾವರ್, ಒ.ಪಿ.ಶರ್ಮಾ, ಅಭಯ ವರ್ಮಾ, ಅನಿಲ್ ಬಾಜಪಾಯಿ, ಜಿತೇಂದ್ರ ಮಹಾಜನ್ ಮತ್ತು ವಿಜೇಂದರ್ ಗುಪ್ತಾ ಅವರು ಹಕ್ಕುಬಾಧ್ಯತಾ ಸಮಿತಿಯ ಎದುರಿನ ಕಲಾಪಗಳು ಪೂರ್ಣಗೊಳ್ಳುವವರೆಗೆ ತಮ್ಮನ್ನು ವಿಧಾನಸಭೆಯಿಂದ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಕಳೆದ ತಿಂಗಳು ದಿಲ್ಲಿ ಉಚ್ಛ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಆದೇಶವನ್ನು ಪ್ರಕಟಿಸಿದ ನ್ಯಾ.ಸುಬ್ರಮಣಿಯಂ ಪ್ರಸಾದ್, ರಿಟ್ ಅರ್ಜಿಗಳನ್ನು ಅನುಮತಿಸಲಾಗಿದೆ ಎಂದು ಹೇಳಿದರು.

ಹಕ್ಕುಬಾಧ್ಯತಾ ಸಮಿತಿಯ ಮುಂದಿನ ಕಲಾಪ ಪೂರ್ಣಗೊಳ್ಳುವವರೆಗೆ ತಮ್ಮನ್ನು ಅಮಾನತುಗೊಳಿಸಿದ್ದು ಸಂಬಂಧಿತ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಶಾಸಕರು ವಾದಿಸಿದ್ದರು.

ಫೆ.15ರಂದು ಲೆ.ಗ.ವಿ.ಕೆ.ಸಕ್ಸೇನಾ ಅವರು ತನ್ನ ಭಾಷಣದಲ್ಲಿ ದಿಲ್ಲಿಯ ಆಪ್ ಸರಕಾರದ ಸಾಧನೆಗಳನ್ನು ಎತ್ತಿ ತೋರಿಸುತ್ತಿದ್ದಾಗ ಬಿಜೆಪಿ ಶಾಸಕರು ಹಲವಾರು ಸಲ ಅವರಿಗೆ ಅಡ್ಡಿಯನ್ನುಂಟು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಪ್ ಶಾಸಕ ದಿಲೀಪ ಪಾಂಡೆ ಅವರು ಮಂಡಿಸಿದ್ದ ಅಮಾನತು ನಿರ್ಣಯವನ್ನು ಅಂಗೀಕರಿಸಿದ್ದ ಸ್ಪೀಕರ್ ರಾಮನಿವಾಸ ಗೋಯೆಲ್ ಅವರು ಪ್ರತಿಪಕ್ಷ ನಾಯಕ ರಾಮವೀರ ಸಿಂಗ್ ಬಿಧೂರಿ ಅವರನ್ನು ಹೊರತುಪಡಿಸಿ ಎಲ್ಲ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಿದ್ದರು ಮತ್ತು ವಿಷಯವನ್ನು ಹಕ್ಕುಬಾಧ್ಯತಾ ಸಮಿತಿಗೆ ಉಲ್ಲೇಖಿಸಿದ್ದರು.

ಬಜೆಟ್ ಮಂಡನೆ ವಿಳಂಬಗೊಂಡ ಕಾರಣದಿಂದ ಅಧಿವೇಶನವನ್ನು ಮಾರ್ಚ್ ಮೊದಲ ವಾರದವರೆಗೆ ವಿಸ್ತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News