ಚುನಾವಣೆಗೆ ಮುನ್ನ ಅಧಿಕಾರಿಗಳ ವರ್ಗಾವಣೆ ನೀತಿಯನ್ನು ಪರಿಷ್ಕರಿಸಿದ ಚುನಾವಣಾ ಆಯೋಗ

Update: 2024-02-24 15:11 GMT

ಚುನಾವಣಾ ಆಯೋಗ | Photo: PTI

ಹೊಸದಿಲ್ಲಿ: ಚುನಾವಣಾ ಆಯೋಗವು ತನ್ನ ನೀತಿಗೆ ಅನುಗುಣವಾಗಿ ಚುನಾವಣೆಗಳಿಗೆ ಮುನ್ನ ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳು ಅದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಇತರ ಯಾವುದೇ ಜಿಲ್ಲೆಗೆ ನಿಯೋಜನೆಗೊಳ್ಳದಂತೆ ನೋಡಿಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ.

ರಾಜ್ಯ ಸರಕಾರಗಳು ಒಂದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ನೆರೆಯ ಜಿಲ್ಲೆಗಳಿಗೆ ಅಧಿಕಾರಿಗಳನ್ನು ವರ್ಗಾವಣೆಗೊಳಿಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಇದಕ್ಕೆ ಅವಕಾಶ ಕಲ್ಪಿಸಿರುವ ತನ್ನ ನೀತಿಯಲ್ಲಿನ ಲೋಪದೋಷಗಳನ್ನು ತಿದ್ದಲು ಅದನ್ನು ಪರಿಷ್ಕರಿಸಿದೆ.

ಚುನಾವಣಾ ಆಯೋಗದ ನೀತಿಯಂತೆ ತಮ್ಮ ತವರು ಜಿಲ್ಲೆಗಳಲ್ಲಿ ನಿಯೋಜನೆಗೊಂಡಿರುವ ಅಥವಾ ಒಂದೇ ಸ್ಥಳದಲ್ಲಿ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರುವ ಅಧಿಕಾರಿಗಳು ಓರ್ವ ಅಭ್ಯರ್ಥಿ ಅಥವಾ ಒಂದು ಪಕ್ಷದ ಪರವಾಗಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಲು ಅವರನ್ನು ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಿಗೆ ಮುನ್ನ ವರ್ಗಾವಣೆ ಮಾಡಲಾಗುತ್ತದೆ.

ಒಂದು ಅಥವಾ ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ ಇತರ ಎಲ್ಲ ರಾಜ್ಯಗಳು ಜಿಲ್ಲೆಯಿಂದ ಹೊರಗೆ ವರ್ಗಾವಣೆಗೊಂಡ ಅಧಿಕಾರಿಗಳು ಅದೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ನಿಯೋಜನೆಗೊಳ್ಳುವುದಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಚುನಾವಣಾ ಆಯೋಗವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಯೋಗವು ರಾಜ್ಯಗಳಿಗೆ ತಾಕೀತು ಮಾಡಿದೆ.

ಇತ್ತೀಚಿಗೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಸಂದರ್ಭ ಹಿರಿಯ ಪೋಲಿಸ್ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗವು ಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News