ಸೂರ್ಯಶಿಕಾರಿಯ ಹಿಂದಿನ ನಾರಿಶಕ್ತಿ: ಯೋಜನಾ ನಿರ್ದೇಶಕಿ ನಿಗರ್ ಶಾಜಿ
ಹೊಸದಿಲ್ಲಿ: ಭಾರತದ ಹಲವು ಬಾಹ್ಯಾಕಾಶ ಯೋಜನೆಗಳ ಯಶಸ್ಸಿನ ಹಿಂದೆ ನಾರಿಶಕ್ತಿ ಇದೆ. ಕಲ್ಪನಾ ಕಾಳಹಸ್ತಿ ಚಂದ್ರಯಾನ-3 ಮಿಷನ್ ಯಶಸ್ವಿಯಾಗುವಲ್ಲಿ ಗಣನೀಯ ಕೊಡುಗೆ ಸಲ್ಲಿಸಿದ್ದರೆ, ನಿಗರ್ ಶಾಜಿ, ಭಾರತದ ಮೊಟ್ಟಮೊದಲ ಸೌರ ಮಿಷನ್ ಎನಿಸಿದ ಆದಿತ್ಯ-ಎಲ್1 ನ ಯೋಜನಾ ನಿರ್ದೇಶಕರಾಗಿದ್ದಾರೆ. ಈ ಎರಡೂ ಮಿಷನ್ ಗಳಿಗೆ ಮುನ್ನ ಚಂದ್ರಯಾನ ಮಿಷನ್-2ನಲ್ಲೂ ಎಂ.ವನಿತಾ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಹಾಗೂ ರಿತು ಕರಿಧಾಲ್ ಶ್ರೀವಾಸ್ತವ ಮಿಷನ್ ನಿರ್ದೇಶಕರಾಗಿ ಮಹತ್ವದ ಪಾತ್ರ ವಹಿಸಿದ್ದರು.
ಶನಿವಾರ ಬೆಳಿಗ್ಗೆ ಶ್ರೀಹರಿಕೋಟಾದಿಂದ ಆದಿತ್ಯ-ಎಲ್1 ಉಡಾವಣೆಯಾದ ಬಳಿಕ, ಕಳೆದ ಎಂಟು ವರ್ಷಗಳಿಂದ ಈ ಸಂಕೀರ್ಣ ಮಿಷನ್ ಹೊಣೆ ನಿಭಾಯಿಸುತ್ತಿದ್ದ ಯೋಜನಾ ನಿರ್ದೇಶಕರಾದ ನಿಗರ್ ಶಾಜಿ, ತಮ್ಮ ಮೇಲೆ ವಿಶ್ವಾಸ ಇರಿಸಿದ್ದಕ್ಕಾಗಿ ಇಸ್ರೋ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದರು. "ಈ ಮಿಷನ್ ಭಾಗವಾಗಿರುವುದು ನನಗೆ ಸಂದ ಗೌರವ ಮತ್ತು ಹೆಮ್ಮೆ. ಆದಿತ್ಯ-ಎಲ್1 ತಂಡದ ಕನಸು ನನಸಾಗಿದೆ. ಎಲ್-1ನ ಸೌರ ಪ್ಯಾನಲ್ ಗಳನ್ನು ನಿಯೋಜಿಸಲಾಗಿದ್ದು, ಈ ಬಾಹ್ಯಾಕಾಶ ನೌಕೆ ಎಲ್1 ತಲುಪುವ ಗುರಿಯೊಂದಿಗೆ 125 ದಿನಗಳ ಪಯಣ ಆರಂಭಿಸಿದೆ. ಆದಿತ್ಯ ಎಲ್1 ನಿಯೋಜನೆಯ ಬಳಿಕ ಇದು ಹೆಲಿಯೊಫಿಸಿಕ್ಸ್ ಹಾಗೂ ಜಾಗತಿಕ ವಿಜ್ಞಾನಿ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಲಿದೆ" ಎಂದು ಅವರು ಬಣ್ಣಿಸಿದರು.
ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಉಡುಪಿ ರಾಮಚಂದ್ರ ರಾವ್ ಅವರ ಕೊಡುಗೆಯನ್ನು ಸ್ಮರಿಸಿದ ಅವರು, "ಸೌರ ಮಿಷನ್ ನ ಬೀಜ ಬಿತ್ತಿದ ನಮ್ಮ ಸರ್ವಶ್ರೇಷ್ಠ ವಿಜ್ಞಾನಿ ಪ್ರೊ.ಯು.ಆರ್.ರಾವ್ ಅವರನ್ನು ನೆನೆಯುತ್ತೇನೆ" ಎಂದು ಹೇಳಿದರು. ಈ ಮಿಷನ್ ಉದ್ದಕ್ಕೂ ಯೋಜನಾ ತಂಡಕ್ಕೆ ಮಾರ್ಗದರ್ಶನ ನೀಡಿದ ತಜ್ಞರ ಸಮಿತಿಗೂ ಅವರು ಕೃತಜ್ಞತೆ ಸಲ್ಲಿಸಿದರು.
ತಮಿಳುನಾಡು ಮೂಲದ, 59 ವರ್ಷ ವಯಸ್ಸಿನ ಶಾಜಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. 10 ಮತ್ತು 12ನೇ ತರಗತಿಯಲ್ಲಿ ಜಿಲ್ಲೆಯಲ್ಲೇ ಅಗ್ರಸ್ಥಾನ ಗಳಿಸಿದ್ದರು. ತಿರುನೆಲ್ವೇಲಿ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ರಾಂಚಿ ಬಿರ್ಲಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂ.ಟೆಕ್ ಪದವಿ ಪಡೆದರು. 1987ರಲ್ಲಿ ಇಸ್ರೋ ಸೇರಿದ ಇವರು 35 ವರ್ಷಗಳ ಇಸ್ರೋ ಸೇವಾವಧಿಯಲ್ಲಿ ಭಾರತದ ದೂರಸಂವೇದಿ ತಂತ್ರಜ್ಞಾನ, ಸಂವಹನ ಹಾಗೂ ಅಂತರ ಗ್ರಹ ಉಪಗ್ರಹ ಯೋಜನೆಗಳ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ.