ಕೇರಳ ಕಾಲೇಜು ಫೆಸ್ಟ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

Update: 2023-11-26 09:07 GMT

Photo: PTI

ತಿರುವನಂತಪುರಂ: ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ(CUSAT)ನಲ್ಲಿ ಆಯೋಜಿಸಲಾಗಿದ್ದ ತಂತ್ರಜ್ಞಾನ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ನಾಲ್ವರು ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿರುವ ಘಟನೆಯ ಕುರಿತು ಕೇರಳ ಸರ್ಕಾರ ಸಮಗ್ರ ತನಿಖೆಗೆ ಆದೇಶಿಸಿದೆ. ಈ ದುರಂತವು ಶನಿವಾರ ಆಯೋಜನೆಗೊಂಡಿದ್ದ CUSAT ವಾರ್ಷಿಕೋತ್ಸವ ಸಮಾರಂಭದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸಭಾಂಗಣದಲ್ಲಿ 1,000ದಿಂದ 1,500 ಮಂದಿಗೆ ಆಸನ ವ್ಯವಸ್ಥೆ ಏರ್ಪಡಿಸಲಾಗಿದ್ದ ಸಂಗೀತ ಸಂಜೆ ಪ್ರಾರಂಭಗೊಳ್ಳುವುದರಲ್ಲಿತ್ತು ಎಂದು thenewsminute.com ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು, ಈ ಘಟನೆಯ ಕುರಿತು ಶಿಕ್ಷಣ ಇಲಾಖೆ ಹಾಗೂ ಪೊಲೀಸರ ಜಂಟಿ ತನಿಖೆಗೆ ಆದೇಶಿಸಲಾಗಿದೆ. ಕಾಲ್ತುಳಿತಕ್ಕೆ ಕಾರಣವಾದ ಸಂದರ್ಭದ ಕುರಿತು ವಿಚಾರಣೆ ನಡೆಸಲು ಮೂರು ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ. ಮಿತಿ ಮೀರಿದ ಜನಸಂದಣಿ ಸಮಸ್ಯೆಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಶೈಕ್ಷಣಿಕ ಸಂಸ್ಥೆಗಳಲ್ಲದೆ ಭಾರಿ ಜನಸಂದಣಿ ಏರ್ಪಡುವ ಎಲ್ಲ ಕಡೆಯೂ ಮುನ್ನೆಚ್ಚರಿಕೆ ನೀಡಲು ಕ್ರಮಗಳನ್ನು ಪ್ರಕಟಿಸಿದರು.

“ಇದಕ್ಕೂ ಮುನ್ನ ಮಿತಿ ಮೀರಿದ ಜನಸಂದಣಿಯ ಕುರಿತು ಜಿಲ್ಲೆಯಲ್ಲಿನ ಎಲ್ಲ ಸಭಾಂಗಣಗಳಿಗೂ ಪೊಲೀಸರು ಮುನ್ನೆಚ್ಚರಿಕೆ ನೀಡಿದ್ದರು. ಆದರೆ, ಆ ಮುನ್ನೆಚ್ಚರಿಕೆಯು ಕೇವಲ ವಿಶ್ವವಿದ್ಯಾಲಯಗಳು ಅಥವಾ ಕಾಲೇಜಿಗೆ ಮಾತ್ರ ಸಂಬಂಧಿಸಿತ್ತು. ಈ ಘಟನೆಯನ್ನು ಪರಿಗಣಿಸಿ, ಭಾರಿ ಜನಸಂದಣಿ ಸೇರುವ ಎಲ್ಲ ಕಡೆಯೂ ಮುನ್ನೆಚ್ಚರಿಕೆಯನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ಕೂಡಾ ಹೇಳಿದ್ದಾರೆ.

ದಿಢೀರ್ ಎಂದು ಮಳೆ ಸುರಿದ ಕಾರಣಕ್ಕೆ ಜನರೆಲ್ಲ ಸಭಾಂಗಣದ ಮೆಟ್ಟಿಲುಗಳತ್ತ ಧಾವಿಸಿದ್ದರಿಂದ ಈ ಕಾಲ್ತುಳಿತ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಜಿತ್ ಕುಮಾರ್ ಹೇಳಿದ್ದಾರೆ. ಈ ಕಾಲ್ತುಳಿತದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದರು.

ಕಾಲ್ತುಳಿತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳನ್ನು ಅತುಲ್ ತಂಪಿ, ಆ್ಯನ್ ರಿಫ್ತಾ ಸಾರಾ ಥಾಮಸ್ ಹಾಗೂ ಪಾಲಕ್ಕಾಡ್ ನ ಆಲ್ಬಿನ್ ಜೋಸೆಫ್ ಎಂದು ಗುರುತಿಸಲಾಗಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಕೋಯಿಕ್ಕೋಡ್ ನ ಸರ್ಕಾರಿ ಅತಿಥಿ ಗೃಹದಲ್ಲಿ ತುರ್ತು ಸಭೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News