500 ಪುಟಗಳ ಬೃಹತ್ ವರದಿಯನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ; ಬಿಎಸ್‌ಪಿ ಸಂಸದ ದಾನಿಶ್ ಅಲಿ

Update: 2023-11-10 14:43 GMT

ದಾನಿಶ್ ಅಲಿ | Photo: PTI

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ತೆಗೆದುಕೊಂಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಲೋಕಸಭೆಯ ನೈತಿಕತೆ ಸಮಿತಿಯು, ತನ್ನ ವರದಿಯನ್ನು ಯಾವುದೇ ಚರ್ಚೆಯಿಲ್ಲದೆ ಕೇವಲ ಎರಡೂವರೆ ನಿಮಿಷಗಳಲ್ಲಿ ಅಂಗೀಕರಿಸಿದೆ ಎಂದು ಬಹುಜನ ಸಮಾಜ ಪಕ್ಷದ ಸಂಸದ ಕುನ್ವರ್ ದಾನಿಶ್ ಅಲಿ ಆರೋಪಿಸಿದ್ದಾರೆ.

ಸಂಸತ್‌ನಲ್ಲಿ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹೀರಾನಂದಾನಿಯಿಂದ ಮೊಯಿತ್ರಾ ಹಣ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ನೀಡಿರುವ ದೂರುಗಳ ಬಗ್ಗೆ ನೈತಿಕತೆ ಸಮಿತಿ ವಿಚಾರಣೆ ನಡೆಸಿದೆ.

ಲೋಕಸಭೆಯಿಂದ ಮೊಯಿತ್ರಾರನ್ನು ಉಚ್ಚಾಟಿಸುವಂತೆ ಸಮಿತಿಯು ತನ್ನ 500 ಪುಟಗಳ ವರದಿಯಲ್ಲಿ ಶಿಫಾರಸು ಮಾಡಿದೆ ಎನ್ನಲಾಗಿದೆ.

ವರದಿಯನ್ನು ತಯಾರಿಸುವಲ್ಲಿ ವಿಧಿವಿಧಾನಗಳನ್ನು ಅನುಸರಿಸಲಾಗಿಲ್ಲ ಎಂದು ದಾನಿಶ್ ಅಲಿ ಹೇಳಿದ್ದಾರೆ. ‘‘ಅಷ್ಟೊಂದು ದೊಡ್ಡ ವರದಿ, ಆದರೆ ಯಾವುದೇ ಚರ್ಚೆಯಿಲ್ಲ’’ ಎಂದು ಎಎನ್‌ಐಯೊಂದಿಗೆ ಮಾತನಾಡಿದ ಅವರು ಹೇಳಿದರು. ‘‘ಇದು ತನಿಖೆ ನಡೆಸುವ ವಿಧಾನವೇ? ತನಿಖೆಯಲ್ಲಿ ಅನುಸರಿಸಲಾಗಿರುವ ವಿಧಾನಗಳ ಬಗ್ಗೆ ನಾವು ಆರಂಭದಿಂದಲೇ ಆಕ್ಷೇಪಗಳನ್ನು ಎತ್ತಿದ್ದೆವು’’ ಎಂದು ಅವರು ಹೇಳಿದರು.

ನ.2ರಂದು ನಡೆದ ಸಭೆಯಲ್ಲಿ, ಸಮಿತಿಯ ಅಧ್ಯಕ್ಷರು ಮೊಯಿತ್ರಾರಿಗೆ ಕೇಳಿದರೆನ್ನಲಾದ ‘‘ಕೊಳಕು’’ ಮತ್ತು ‘‘ಅಶ್ಲೀಲ’’ ಪ್ರಶ್ನೆಗಳ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಅವರು ನುಡಿದರು.

ಭಿನ್ನಮತದ ಹೇಳಿಕೆಗಳನ್ನು ದಾಖಲಿಸುವ ಮೂಲಕ ಪ್ರತಿಪಕ್ಷವು ತನ್ನ ಕರ್ತವ್ಯವನ್ನು ನಿಭಾಯಿಸಿದೆ ಎಂದು ಅಲಿ ಗುರುವಾರ ಹೇಳಿದರು.

ಅದೇ ವೇಳೆ, ಲೋಕಸಭೆಯ ಕಲಾಪ ನಿರ್ವಹಣೆ ಮತ್ತು ವಿಧಿವಿಧಾನಗಳ ನಿಯಮಾವಳಿಗಳ 275ನೇ ನಿಯಮವನ್ನು ಉಲ್ಲಂಘಿಸಿರುವುದಕ್ಕಾಗಿ ಸಮಿತಿಯ ವರದಿಯು ದಾನಿಶ್ ಅಲಿಗೂ ಛೀಮಾರಿ ಹಾಕಿದೆ. ನ.2ರ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಸೊನ್ಕಾರ್‌ರ ಪ್ರಶ್ನೆಗಳ ವೈಖರಿಗೆ ದಾನಿಶ್ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಭೆಯ ವಿವರಗಳನ್ನು ಅವರು ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ಆರೋಪಿಸಿ ಸಮಿತಿಯು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

‘‘ಲೋಕಸಭಾ ಸದಸ್ಯರು ನಿಯಮಗಳಿಗೆ ಬದ್ಧರಾಗಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿರುವುದು ಬಿಜೆಪಿ ಸಂಸದರು. ಅವರು ನ.2 ಮತ್ತು 3ರಂದು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಆದರೆ, ಅವರಿಗೆ 275ನೇ ನಿಯಮವನ್ನು ಅನ್ವಯಿಸಲಾಗಿಲ್ಲ. ಅದು ಅನ್ವಯವಾಗುವುದು ದಾನಿಶ್ ಅಲಿ ಮತ್ತು ಪ್ರತಿಪಕ್ಷ ಸಂಸದರಿಗೆ ಮಾತ್ರ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News