ಗಗನಕ್ಕೇರಿದ್ದ ಟೊಮ್ಯಾಟೊ ಬೆಲೆ ಈಗ ಪಾತಾಳಕ್ಕೆ!
ಪುಣೆ: ಕೇವಲ ಒಂದು ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ 200 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಇದೀಗ 3-5 ರೂಪಾಯಿಗೆ ಕುಸಿದಿದ್ದು, ಮಹಾರಾಷ್ಟ್ರದ ಟೊಮ್ಯಾಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮ್ಯಾಟೊವನ್ನು ಗಿಡದಲ್ಲಿಯೇ ಬಿಡುವುದು ಅಥವಾ ತಮ್ಮ ಉತ್ಪಾದನೆಯನ್ನು ನಾಶಪಡಿಸುವುದಷ್ಟೇ ಈಗ ರೈತರ ಮುಂದಿರುವ ಮಾರ್ಗ.
ಟೊಮ್ಯಾಟೊ ಬಂಪರ್ ಬೆಳೆಯಿಂದಾಗಿ ಈ ಮಹಾ ಕುಸಿತ ಸಂಭವಿಸಿದ್ದು, ಟೊಮ್ಯಾಟೊ ಬೆಳೆಯುವ ಪ್ರತಿಯೊಬ್ಬ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. "ಈ ಬಗೆಯ ಮಾರುಕಟ್ಟೆ ವ್ಯತ್ಯಯವನ್ನು ತಡೆಯಲು ಟೊಮ್ಯಾಟೊ ಮತ್ತು ಈರುಳ್ಳಿಗೆ ಕನಿಷ್ಠ ಬೆಂಬಲಬೆಲೆ (ಎಂಎಸ್ಪಿ) ನಿಗದಿಪಡಿಸುವುದೊಂದೇ ದಾರಿ" ಎನ್ನುತ್ತಾರೆ ನಾಸಿಕ್ನ ಕೃಷಿ ಹೋರಾಟಗಾರ ಸಚಿನ್ ಹೋಳ್ಕರ್.
ಕೆಲ ಮಂದಿ ರೈತರು ಕನಿಷ್ಠ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಸಾಧ್ಯವಾಗಿದ್ದರೂ, ತಾವು ಮಾಡಿದ ಹೂಡಿಕೆಯ ಅರ್ಧದಷ್ಟು ಪ್ರತಿಫಲ ಕೂಡಾ ದೊರಕಿಲ್ಲ ಎನ್ನುವುದು ರೈತರ ಅಳಲು. ಪ್ರತಿ ಎಕರೆ ಟೊಮ್ಯಾಟೊ ಬೆಳೆಯಲು ಕನಿಷ್ಠ 2 ಲಕ್ಷ ರೂಪಾಯಿ ಬಂಡವಾಳ ಬೇಕಾಗುತ್ತದೆ ಎನ್ನುವುದು ರೈತರ ವಾದ.
ಪುಣೆಯಲ್ಲಿ ಟೊಮ್ಯಾಟೊ ಬೆಲೆ ಕೆ.ಜಿ.ಗೆ 5 ರೂಪಾಯಿಗೆ ಇಳಿದಿದೆ. ನಾಸಿಕ್ನ ಪ್ರಮುಖ ಮೂರು ಸಗಟು ಮಂಡಿಗಳಾದ ಪಿಂಪಲಗಾಂವ್, ನಾಸಿಕ್ ಮತ್ತು ಲಸಲ್ಗಾಂವ್ನಲ್ಲಿ ಆರು ವಾರದ ಹಿಂದೆ 20 ಕೆಜಿ ಬುಟ್ಟಿಗೆ 2000 ರೂಪಾಯಿ ಇದ್ದ ಬೆಲೆ ಇದೀಗ 90 ರೂಪಾಯಿಗೆ ಇಳಿದಿದೆ. ಕೊಲ್ಲಾಪುರದಲ್ಲಿ ತಿಂಗಳ ಹಿಂದೆ ಪ್ರತಿ ಕೆ.ಜಿ.ಗೆ 220 ರೂಪಾಯಿ ಇದ್ದ ಟೊಮ್ಯಾಟೊ ದರ ಇದೀಗ 2-3 ರೂಪಾಯಿಗೆ ಇಳಿದಿದೆ. ಅತಿದೊಡ್ಡ ಸಗಟು ಮಾರುಕಟ್ಟೆ ಎನಿಸಿದ ಪಿಂಪಲಗಾಂವ್ ಎಪಿಎಂಸಿಯಲ್ಲಿ 2 ಲಕ್ಷ ಬುಟ್ಟಿ ಟೊಮ್ಯಾಟೊ ಹರಾಜು ಆಗುತ್ತಿದೆ.