ಶಿವಸೇನೆ ಶಾಸಕರ ಅನರ್ಹತೆ ನಿರ್ಧರಿಸಲು ಸ್ಪೀಕರ್ ಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಶಿವಸೇನೆಯ ಎರಡು ಬಣಗಳು ಎದುರಾಳಿ ಬಣದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಗೆ ನೀಡಿರುವ ಗಡುವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮತ್ತೊಮ್ಮೆ ವಿಸ್ತರಿಸಿದೆ.
ಇದಕ್ಕೂ ಮೊದಲು, ಅರ್ಜಿಗಳ ಬಗ್ಗೆ ಡಿಸೆಂಬರ್ 31ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಅಕ್ಟೋಬರ್ 30ರಂದು ನಾರ್ವೇಕರ್ ಗೆ ಸೂಚನೆ ನೀಡಿತ್ತು. ಶುಕ್ರವಾರ, ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವೊಂದು ಈ ಗಡುವನ್ನು ಜನವರಿ 10ಕ್ಕೆ ವಿಸ್ತರಿಸಿತು.
ಸ್ಪೀಕರ್ ಪರವಾಗಿ ವಿಚಾರಣೆಗೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಗಡುವನ್ನು ಮೂರು ವಾರ ವಿಸ್ತರಿಸುವಂತೆ ನ್ಯಾಯಾಲಯವನ್ನು ಕೋರಿದರು. 2.71 ಲಕ್ಷ ಪುಟಗಳ ದಾಖಲೆಗಳನ್ನು ಸ್ಪೀಕರ್ ಗೆ ಸಲ್ಲಿಸಲಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಅವರು ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಗಡುವಿನ ಹೆಚ್ಚುವರಿ ವಿಸ್ತರಣೆಯನ್ನು ನಾವು ಕೋರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತಿಳಿಸಿದರು.
ಆದರೆ, ಇದಕ್ಕೆ ಶಿವಸೇನೆ (ಉದ್ಧವ್ ಬಾಳಾ ಠಾಕ್ರೆ ಬಣ)ಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ವಿರೋಧ ವ್ಯಕ್ತಪಡಿಸಿದರು. ಇಂಥ ಮನವಿಯನ್ನು ನಾರ್ವೇಕರ್ ಇದಕ್ಕೆ ಮೊದಲೂ ಮಾಡಿದ್ದಾರೆ, ಹಾಗಾಗಿ ಅವರಿಗೆ ಕೇವಲ ಒಂದು ವಾರದ ವಿಸ್ತರಣೆಯನ್ನು ಮಾತ್ರ ನೀಡಬೇಕು ಎಂದು ಅವರು ಹೇಳಿದರು.
‘‘ನಿರ್ಧಾರಗಳನ್ನು ಘೋಷಿಸಲು ನಾವು ಜನವರಿ 10ರವರೆಗೆ ಸಮಯಾವಕಾಶವನ್ನು ವಿಸ್ತರಿಸುತ್ತಿದ್ದೇವೆ’’ ಎಂದು ನ್ಯಾಯಾಲಯ ಹೇಳಿತು.
ಶಿವಸೇನೆಯು 2022ರ ಜೂನ್ ನಲ್ಲಿ ಇಬ್ಭಾಗವಾಗಿತ್ತು. ಶಿವಸೇನೆಯ ಭಿನ್ನಮತೀಯ ನಾಯಕ ಏಕನಾಥ ಶಿಂದೆ ನೇತೃತ್ವದಲ್ಲಿ 39 ಶಾಸಕರು ಪಕ್ಷ ತೊರೆದು ಬಿಜೆಪಿಗೆ ಬೆಂಬಲ ನೀಡಿದ್ದರು. ಇದರಿಂದಾಗಿ, ಆಗ ಅಧಿಕಾರದಲ್ಲಿದ್ದ ಮಹಾವಿಕಾಸ ಅಘಾಡಿ ಮೈತ್ರಿಕೂಟ ಸರಕಾರವು ಪತನಗೊಂಡಿತ್ತು. ಬಳಿಕ ಬಿಜೆಪಿಯು ಭಿನ್ನಮತೀಯ ಶಿವಸೇನೆ ಶಾಸಕರ ಬೆಂಬಲದಿಂದ ರಾಜ್ಯದಲ್ಲಿ ಸರಕಾರ ರಚಿಸಿತ್ತು.