‘ಐಫೋನ್‌ಗಳಿಗೆ ಕನ್ನ’ ಪ್ರಕರಣ: ಕೇಂದ್ರದಿಂದ ಆ್ಯಪಲ್‌ಗೆ ನೋಟಿಸ್; ಸಿಇಆರ್‌ಟಿ ತನಿಖೆ ಆರಂಭ

Update: 2023-11-02 15:02 GMT

Photo- PTI

ಹೊಸದಿಲ್ಲಿ: ಸರಕಾರಿ ಪ್ರಾಯೋಜಿತ ಕನ್ನಗಾರರು ನಿಮ್ಮ ಐಫೋನ್‌ಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎಂದು ಐಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ಪ್ರತಿಪಕ್ಷ ನಾಯಕರಿಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿರುವ ಬಗ್ಗೆ ಕಂಪ್ಯೂಟರ್ ತುರ್ತುಸ್ಥಿತಿ ಪ್ರತಿಕ್ರಿಯಾ ತಂಡ ( ಸಿಇಆರ್‌ಟಿ) ತನ್ನ ತನಿಖೆಯನ್ನು ಆರಂಭಿಸಿದೆಯೆಂದು ಮಾಹಿತಿತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ಗುರುವಾರ ತಿಳಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿ ಆ್ಯಪಲ್ ಕಂಪೆನಿಯು ಸಿಇಆರ್‌ಟಿ ಜೊತೆ ತನಿಖೆಗೆ ಸಹಕರಿಸಲಿದೆಯೆಂದು ಕೃಷ್ಣನ್ ಅವರು ಸುದ್ದಿಗಾರರಿಗೆ ತಿಳಿಸಿದರು. ಮೀಟಿ-ಎನ್‌ಎಸ್‌ಎಫ್ ಸಂಶೋಧನಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಹಿಸಿದ್ದ ಸಂದರ್ಭ ಅವರು ಸುದಿಗಾರರಿಗೆ ಈ ವಿಷಯ ತಿಳಿಸಿದರು.

ಸಿಇಆರ್‌ಟಿ, ಕಂಪ್ಯೂಟರ್ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳಿಗೆ ಪ್ರತಿಕ್ರಿಯಿಸುವ ರಾಷ್ಟ್ರೀಯ ನೋಡಲ್ ಏಜೆನ್ಸಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಆ್ಯಪಲ್ ಸಂಸ್ಥೆಗೆ ನೋಟಿಸ್ ಕಳುಹಿಸಲಾಗಿದೆಯೇ ಎಂಬ ಪ್ರಶ್ನೆಗೆ ಐಟಿ ಕಾರ್ಯದರ್ಶಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ತಮ್ಮ ಐಫೋನ್‌ಗಳನ್ನು ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಹ್ಯಾಕ್ ಮಾಡಲು ಯತ್ನಿಸುತ್ತಿದ್ದಾರೆಂಬ ಎಚ್ಚರಿಕೆ ಸಂದೇಶವನ್ನು ತಾವು ಆ್ಯಪಲ್ ಸಂಸ್ಥೆಯಿಂದ ಸ್ವೀಕರಿಸಿರುವುದಾಗಿ ಹಲವಾರು ಪ್ರತಿಪಕ್ಷ ನಾಯಕರು ಮಂಗಳವಾರ ಬಹಿರಂಗಪಡಿಸಿದ್ದರು. ಸರಕಾರವು ತಮ್ಮ ಮೊಬೈಲ್‌ಫೋನ್‌ಗಳನ್ನು ಹ್ಯಾಕ್ ಮಾಡಿದೆಯೆಂದು ಅವರು ಆಪಾದಿಸಿದ್ದರು.

ಆ್ಯಪಲ್‌ನಿಂದ ಇಂತಹ ಎಚ್ಚರಿಕೆ ಸಂದೇಶವನ್ನು ಪಡೆದ ರಾಜಕಾರಣಿಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ಶಶಿ ಥರೂರ್, ಪವನ್ ಖೇರಾ, ಕೆ.ಸಿ.ವೇಣುಗೋಪಾಲ್, ಸುಪ್ರಿಯಾ ಶ್ರೀನಾಥೆ ಟಿ.ಎಸ್.ಸಿಂಗ್‌ದೇವ್ ಹಾಗೂ ಭೂಪೀದರ್ ಎಸ್. ಹೂಡಾ,ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್.ಪಿ. ವರಿಷ್ಠ ಅಖಿಲೇಶ್ ಯಾದವ್ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News