ಆರೋಪಿಗಳನ್ನು ಜೀವನ ಪರ್ಯಂತ ಜೈಲಿನಲ್ಲಿ ಇರಿಸಬೇಕು: ಬಿಲ್ಕಿಸ್ ಬಾನು ಪ್ರಕರಣದ ಪ್ರಮುಖ ಸಾಕ್ಷಿಯ ಹೇಳಿಕೆ
ಅಹಮದಾಬಾದ್: ಬಿಲ್ಕಿಸ್ ಬಾನು ಪ್ರಕರಣದಲ್ಲಿ ತಮ್ಮ ಹೇಯಕೃತ್ಯಕ್ಕಾಗಿ ದೋಷಿಗಳೆಂದು ರುಜುವಾತಾಗಿರುವ ವ್ಯಕ್ತಿಗಳನ್ನು ನೇಣಿಗೆ ಹಾಕಬೇಕು ಇಲ್ಲವೇ ಜೀವ ಇರುವವರೆಗೂ ಜೈಲಿನಲ್ಲಿಡಬೇಕು. ಆಗ ಮಾತ್ರ ನ್ಯಾಯ ದೊರೆತಂತಾಗುತ್ತದೆ ಎಂದು ಬಿಲ್ಕಿಸ್ ಬಾನು ಪ್ರಕರಣದ ಪ್ರಮುಖ ಸಾಕ್ಷಿ ಹೇಳಿದ್ದಾರೆ.
ಗುಜರಾತ್ ನಲ್ಲಿ 2002ರಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ದಾಹೋಡ್ ಜಿಲ್ಲೆಯ ಲಿಮ್ಕೇಡಾ ತಾಲೂಕಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿ ನಡೆದು, ತನ್ನ ಕುಟುಂಬದ 14 ಮಂದಿಯ ಮೃತ್ಯುವನ್ನು ಕಣ್ಣಾರೆ ಕಂಡಿದ್ದ ಬಿಲ್ಕಿಸ್ ಬಾನು ಅವರ ಸೋದರ ಸಂಬಂಧಿ, ಆ ದಾಳಿ ನಡೆಸಿದ್ದ ಗುಂಪಿನ ಪೈಕಿ ಏಳು ಮಂದಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಆತನಿಗೆ 28 ವರ್ಷ ವಯಸ್ಸಾಗಿದ್ದು, ಅಹಮದಾಬಾದಿಯಲ್ಲಿ ತನ್ನ ಪತ್ನಿ ಹಾಗೂ ಐದು ವರ್ಷದ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ.
“ನನ್ನ ಕಣ್ಣೆದುರಿಗೇ ನಡೆದಿದ್ದ ನನ್ನ ಪ್ರೀತಿಪಾತ್ರ ಹತ್ಯೆಯಿಂದ ನಾನು ಆಘಾತಕ್ಕೀಡಾಗಿದ್ದೆ. ಇಷ್ಟು ವರ್ಷಗಳಾದ ನಂತರವೂ ಆ ಕಾಡುವ ನೆನಪು ಬಂದಾಗ ನಿದ್ರೆಯಿಂದ ಮೇಲೆದ್ದು ಕಿರುಚಿಕೊಳ್ಳುತ್ತೇನೆ” ಎಂದು ಅವರು ಹೇಳುತ್ತಾರೆ.
“ಅವರು ಬಿಡುಗಡೆಯಾದಾಗ ನನಗೆ ತುಂಬಾ ನೋವಾಗಿತ್ತು. ಅವರನ್ನು ಮತ್ತೆ ಜೈಲಿಗೆ ಕಳಿಸುವುದರಿಂದ ನಾನು ಕೊಂಚ ನಿರಾಳನಾಗಿದ್ದೇನೆ. ಗಲಭೆ ನಡೆದ ದಿನ ನನ್ನ ಕಣ್ಣೆದುರಿಗೇ ನನ್ನ ತಾಯಿ ಹಾಗೂ ನನ್ನ ಹಿರಿಯ ಸಹೋದರಿ ಸೇರಿದಂತೆ ನನ್ನ ಕುಟುಂಬದ 14 ಮಂದಿಯನ್ನು ಹತ್ಯೆಗೈಯ್ಯಲಾಗಿತ್ತು” ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.
“ಎಲ್ಲ ಅಪರಾಧಿಗಳನ್ನೂ ನೇಣಿಗೇರಿಸಬೇಕು ಇಲ್ಲವೆ ಅವರು ಜೀವಂತ ಇರುವರೆಗೂ ಜೈಲಿನಲ್ಲಿಡಬೇಕು. ಆಗ ಮಾತ್ರ ನ್ಯಾಯ ದೊರೆತಂತಾಗುತ್ತದೆ. ಈ ವ್ಯಕ್ತಿಗಳನ್ನು ಮತ್ತೆ ಎಂದಿಗೂ ಬಿಡುಗಡೆ ಮಾಡಬಾರದು” ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಹಾಗೂ 14 ಮಂದಿ ಹತ್ಯೆಯ ಪ್ರಕರಣದಲ್ಲಿ 11 ಮಂದಿ ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸುವ ಗುಜರಾತ್ ಸರ್ಕಾರದ ಆಗಸ್ಟ್ 2022ರ ನಿರ್ಧಾರವನ್ನು ಜನವರಿ 8ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.