ಉಕ್ಕಿ ಹರಿಯುತ್ತಿದ್ದ ಗಂಗಾ ನದಿಗೆ ಧುಮುಕಿ ಪ್ರವಾಹದಲ್ಲಿ ಮುಳುಗುತ್ತಿದ್ದ ಕನ್ವರಿಯಾನನ್ನು ರಕ್ಷಿಸಿದ ಯೋಧ ಆಶಿಕ್ ಅಲಿ

Update: 2024-07-23 17:21 GMT

PC : X  \ @uttarakhandcops

ಹರಿದ್ವಾರ (ಉತ್ತರಾಖಂಡ): ರಾಜ್ಯ ವಿಪತ್ತು ನಿರ್ವಹಣಾ ಪಡೆಯು ಹರಿದ್ವಾರದ ಗಂಗಾನದಿಯ ಪ್ರವಾಹದಲ್ಲಿ ಮುಳುಗುತ್ತಿದ್ದ ಓರ್ವ ಕನ್ವರಿಯಾನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಮುಳುಗುತ್ತಿದ್ದ ಯುವಕನನ್ನು ರಕ್ಷಿಸಲು ಗಂಗಾ ನದಿಗೆ ಧುಮುಕಿರುವ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಯೋಧರ ಸಾಹಸದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಉತ್ತರಾಖಂಡ ಪೊಲೀಸರು, "ಹರಿದ್ವಾರದ ಕಾಂಗ್ರಾ ಘಾಟ್ ಬಳಿ ದಿಲ್ಲಿಯಿಂದ ಬಂದಿದ್ದ ಶಿವ ಭಕ್ತರೊಬ್ಬರು ಭಾರಿ ಪ್ರವಾಹದಲ್ಲಿ ಮುಳುಗಿ ಹೋಗಿದ್ದರು. ಈ ಸಂದರ್ಭದಲ್ಲಿ ಉತ್ತರಾಖಂಡದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಯೋಧ ಎಚ್.ಸಿ.‌ ಆಶಿಕ್ ಅಲಿ ಗಂಗಾ ನದಿಗೆ ಧುಮುಕಿ, ಆ ಯುವಕನನ್ನು ಗಂಗಾ ನದಿಯಿಂದ ಸುರಕ್ಷಿತವಾಗಿ ಹೊರಗೆಳೆದು ತರುವ ಮೂಲಕ ಆತನ ಜೀವ ರಕ್ಷಣೆ ಮಾಡಿದ್ದಾರೆ" ಎಂದು ಪ್ರಶಂಸಿಸಿದೆ.

ಈ ವೈರಲ್ ವಿಡಿಯೊದಲ್ಲಿ ಗಂಗಾ ನದಿಯಲ್ಲಿನ ಭಾರಿ ಪ್ರವಾಹದಲ್ಲಿ ಓರ್ವ ಕನ್ವರಿಯಾ ಮುಳುಗುತ್ತಿದ್ದು, ಆತನನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಯೋಧರು ಗಂಗಾ ನದಿಯಲ್ಲಿ ಈಜುತ್ತಿರುವುದು ಸೆರೆಯಾಗಿದೆ. ನಂತರ ಆ ಯುವಕ ನದಿಯಿಂದ ಹೊದ ಬರುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ಈ ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಓರ್ವ ಎಕ್ಸ್ ಬಳಕೆದಾರ, ಯೋಧರಿಗೆ ಗೌರವ ನಮನಗಳು ಎಂದು ಹೇಳಿದ್ದರೆ, "ರಾಜ್ಯ ವಿಪತ್ತು ನಿರ್ವಹಣಾ ಪಡೆಯಿಂದ ಉತ್ತಮ ಕೆಲಸ. ವಂದನೆಗಳು ಆಶಿಕ್ ಅಲಿ" ಎಂದು ಮತ್ತೋರ್ವ ಬಳಕೆದಾರರು ಅಭಿನಂದಿಸಿದ್ದಾರೆ.

"ಇದು ಭಾರತ ಮತ್ತು ಭಾರತದ ಸಂಸ್ಕೃತಿ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್ಖರು, ಕ್ತಿಶ್ಚಿಯನ್ನರೆಲ್ಲ ಸಹೋದರರಂತೆ ಬದುಕುತ್ತಿದ್ದಾರೆ ಮತ್ತು ನೀವದರ ಬಗ್ಗೆ ಸುಳ್ಳು ಹೇಳಲು ಸಾಧ್ಯವಿಲ್ಲ. ಈಗ ನೋಡಿ, ಮುಸ್ಲಿಂ ಸಹೋದರನು ತನ್ನ ಜೀವವನ್ನು ಪಣಕ್ಕಿಟ್ಟು ಶಿವ ಭಕ್ತನನ್ನು ರಕ್ಷಿಸಿದ್ದಾನೆ. ದ್ವೇಷ ಹರಡುತ್ತಿರುವವರಿಗೆ ಇದು ನಾಚಿಕೆಗೇಡಿನ ಸಂಗತಿ" ಎಂದು ಮತ್ತೋರ್ವರು ಚಾಟಿ ಬೀಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News