ಪಂಜಾಬ್ ನಲ್ಲಿ ರೈತರಿಂದ ಮೂರು ಗಂಟೆಗಳ ʼರೈಲು ತಡೆʼ ಪ್ರತಿಭಟನೆ
ಚಂಡೀಗಢ: ಬೆಳೆಗಳಿಗೆ ಕಾನೂನಾತ್ಮಕ ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬ ಬೇಡಿಕೆಯೂ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಪಂಜಾಬ್ ರೈತರು ಮೂರು ಗಂಟೆಗಳ ಕಾಲ ರೈಲು ತಡೆ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಬುಧವಾರ ಪಂಜಾಬ್ ನ ಹಲವು ಸ್ಥಳಗಳಿಗೆ ತೆರಳುವ ರೈಲುಗಳನ್ನು ತಡೆಹಿಡಿದರು.
ಈ ರೈಲು ತಡೆ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ ಸಂಘಟನೆಗಳು ಕರೆ ನೀಡಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಿಸಾನ್ ಮಝ್ದೂರ್ ಮೋರ್ಚಾ ಸಂಘಟನೆಯ ನಾಯಕ ಸರವಣ್ ಸಿಂಗ್ ಪಂಧೇರ್, ರೈತರು ಪಂಜಾಬ್ ನ ಹಲವಾರು ಸ್ಥಳಗಳಲ್ಲಿ ರೈಲ್ವೆ ಹಳಿಗಳ ಮೇಲೆ ಕುಳಿತು ಮಧ್ಯಾಹ್ನ 12 ಗಂಟೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯು ಮಧ್ಯಾಹ್ನ 3 ಗಂಟೆಯವರೆಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಮೋಗಾ, ಫರೀದ್ ಕೋಟ್, ಕಡಿಯನ್ ಹಾಗೂ ಗುರುದಾಸ್ ಪುರ್ ನಲ್ಲಿನ ಬಟಾಲಾ, ಜಲಂಧರ್ ನ ಫಿಲ್ಲೌರ್, ತಂಡ, ದಸುಯ, ಹೋಶಿಯಾರ್ ಪುರ್ ನ ಮಹಿಳ್ ಪುರ್, ಮಾಖು, ಫಿರೋಝ್ ಪುರ್ ನಲ್ಲಿನ ತಲ್ವಾಂಡಿ ಭಾಯ್, ಲೂಧಿಯಾನದಲ್ಲಿನ ಸಹ್ನೆವಾಲ್, ಪಾಟಿಯಾಲದ ಶಂಭು, ಮೊಹಾಲಿ ಹಾಗೂ ಸಂಗೂರ್ ನ ಸುನಮ್ ಹಾಗೂ ಲೆಹ್ರಾದಲ್ಲಿ ಈ ಪ್ರತಿಭಟನೆ ನಡೆಯಿತು.
ಫೆಬ್ರವರಿ 13ರಂದು ದಿಲ್ಲಿಗೆ ಪ್ರವೇಶಿಸುವುದನ್ನು ಪಂಜಾಬ್ ಮತ್ತು ಹರ್ಯಾಣ ಗಡಿಯಾದ ಶಂಭು ಗಡಿ ಬಳಿ ಭದ್ರತಾ ಪಡೆಗಳು ತಡೆದಾಗಿನಿಂದ, ರೈತರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಹಾಗೂ ಕಿಸಾನ್ ಮಝ್ದುರ್ ಮೋರ್ಚಾ ಬ್ಯಾನರ್ ನಡಿ, ಶಂಭು ಗಡಿ ಬಳಿ ಧರಣಿ ನಡೆಸುತ್ತಿದ್ದಾರೆ.