ಬಿಜೆಪಿ ಟಿಕೆಟ್ ಅನಿಶ್ಚಿತ: ಮತದಾರರ ಬಳಿಗೆ 'ಬ್ರಾಂಡ್ ವರುಣ್' !

Update: 2024-03-10 02:42 GMT

ವರುಣ್ ಗಾಂಧಿ (PTI)

ಪಿಲಿಭಿಟ್: ಬಿಜೆಪಿ ಟಿಕೆಟ್ ದೊರಕುವುದು ಅನಿಶ್ಚಿತ ಎಂಬ ಕಾರಣದಿಂದ ಪಿಲಿಭಿಟ್ ಸಂಸದ ವರುಣ್ ಗಾಂಧಿ ಕಳೆದ ಆರು ತಿಂಗಳಿಂದ ತಮ್ಮ "ಪೋಲ್ ಆರ್ಮಿ" ಮೂಲಕ ಕ್ಷೇತ್ರದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 'ಬ್ರಾಂಡ್ ವರುಣ್' ಗಟ್ಟಿಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಉತ್ತರ ಪ್ರದೇಶದಿಂದ ಬಿಜೆಪಿ ಟಿಕೆಟ್‍ನಲ್ಲಿ ಸ್ಪರ್ಧಿಸುವ 51 ಮಂದಿಯ ಪಟ್ಟಿಯನ್ನು ಈಗಾಗಲೇ ಪಕ್ಷ ಬಿಡುಗಡೆ ಮಾಡಿದ್ದು, ಇದರಲ್ಲಿ ಬಹುತೇಕ ಹಾಲಿ ಸಂಸದರ ಹೆಸರುಗಳಿವೆ. ಆದರೆ ವರುಣ್‍ಗಾಂಧಿ ಮತ್ತು ಸುಲ್ತಾನ್‍ಪುರ ಸಂಸದೆ ಹಾಗೂ ವರುಣ್ ತಾಯಿ ಮೇನಕಾ ಗಾಂಧಿಯವರ ಹೆಸರು ಇಲ್ಲ.

"ಅವರು ಸದಾ ಪಕ್ಷದ ಸ್ಥಳೀಯ ಘಟಕದ ಜತೆ ಅಂತರ ಕಾಯ್ದುಕೊಂಡಿದ್ದರು. ಕಳೆದ ಎರಡು ಚುನಾವಣೆಗಳಲ್ಲಿ ಸ್ಥಳೀಯ ಘಟಕದ ನೆರವಿನೊಂದಿಗೆ ಬಿಜೆಪಿ ಟಿಕೆಟ್‍ನಿಂದ ಗೆಲುವು ಸಾಧಿಸುತ್ತಾ ಬಂದಿದ್ದ ಅವರು, ವೈಯಕ್ತಿಕ ವರ್ಚಸ್ಸಿನಲ್ಲೇ ಗೆಲುವು ಸಾಧಿಸಿದ್ದೆ ಎಂಬ ನಂಬಿಕೆಯಲ್ಲಿದ್ದವರು. ಪಕ್ಷದ ಶಿಸ್ತನ್ನು ನಿರ್ಲಕ್ಷಿಸಿ, 2022ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು" ಎಂದು ಪಿಲಿಭಿಟ್ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ಪಿಲಿಭಿಟ್‍ನಲ್ಲಿ ವರುಣ್‍ಗಾಂಧಿ ವಹಿಸಿದ ಪಾತ್ರದ ಬಗ್ಗೆ ಪಕ್ಷದ ಮುಖಂಡರಿಗೆ ಅರಿವು ಇದೆ. ಆದಾಗ್ಯೂ ಅವರನ್ನು ಪಕ್ಷ ಮತ್ತೆ ಕಣಕ್ಕೆ ಇಳಿಸಿದರೆ ಪಕ್ಷದ ಹೈಕಮಾಂಡ್ ನಿರ್ಧಾರವನ್ನು ನಾನು ಒಪ್ಪಿಕೊಳ್ಳುತ್ತೇನೆ" ಎಂದು ಪಿಲಿಭಿಟ್‍ನ ಬರ್ಖೇರಾ ವಿಧಾನಸಭಾ ಕ್ಷೇತ್ರದ ಶಾಸಕ ಪ್ರವಕ್ತಾನಂದ ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News