ದಲಿತರನ್ನು ದಮನಿಸುವ ಊಳಿಗಮಾನ್ಯ ಪದ್ಧತಿ ವಿರುದ್ಧ ಸಮರ ಸಾರುವ ಕಾಲ ಬಂದಿದೆ: ಹೇಮಂತ್ ಸೊರೇನ್
ರಾಂಚಿ: ಬಡವರು, ದಲಿತರು ಹಾಗೂ ಬುಡಕಟ್ಟು ಜನರನ್ನು ದಮನಿಸುವ ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಸಮರ ಸಾರುವ ಕಾಲ ಬಂದಿದೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಗುರುವಾರ ಹೇಳಿದ್ದಾರೆ.
‘‘ಬೆದರಿಕೆಗ ನಾನು ಮಣಿಯಲಾರೆ. ಅಂತಿಮವಾಗಿ ಸತ್ಯಕ್ಕೆ ಜಯವಾಗಲಿದೆ’’ ಎಂದು ಬಂಧನವಾಗುವುದಕ್ಕಿಂತ ಮುನ್ನ ದಾಖಲಿಸಿದ ವೀಡಿಯೊ ಸಂದೇಶದಲ್ಲಿ ಸೊರೇನ್ ಹೇಳಿದ್ದಾರೆ.
ತಾನು ಬಂಧಿತನಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ತಿಳಿಸಿದ್ದಾರೆ.
‘‘ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿನವಿಡಿ ವಿಚಾರಣೆ ನಡೆಸಿದ ಬಳಿಕ ನನ್ನನ್ನು ಬಂಧಿಸಿದ್ದಾರೆ. ಇದು ಪೂರ್ವ ಯೋಜಿತ. ನಾನು ಯಾವುದೇ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ನನ್ನ ವಿರುದ್ಧ ಈಡಿ ಬಳಿ ಯಾವುದೇ ಪುರಾವೆ ಇಲ್ಲ. ಆದರೂ ದಿಲ್ಲಿಯಲ್ಲಿರುವ ನನ್ನ ನಿವಾಸದ ಮೇಲೆ ದಾಳಿ ನಡೆಸಿ ನನ್ನ ಹೆಸರಿಗೆ ಕಳಂಕ ತಂದಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಸೊರೇನ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಹುದ್ದೆಗೆ ಬುಧವಾರ ರಾತ್ರಿ ರಾಜೀನಾಮೆ ನೀಡಿದ ಬಳಿಕ ಜಾರಿ ನಿರ್ದೇಶನಾಲಯ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿತು. ಅನಂತರ ಜಾರ್ಖಂಡ್ನಲ್ಲಿ ಆಡಳಿತಾರೂಢ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಶಾಸಕಾಂಗ ಪಕ್ಷದ ನಾಯಕನಾಗಿ ಹಿರಿಯ ನಾಯಕ ಚಂಪೈ ಸೊರೇನ್ ಸರ್ವಾನುಮತದಿಂದ ಆಯ್ಕೆಯಾದರು.
ಹೇಮಂತ್ ಸೊರೇನ್ ಗೆ 1 ದಿನ ನ್ಯಾಯಾಂಗ ಬಂಧನ
ಜಾರಿ ನಿರ್ದೇಶನಾಲಯದಿಂದ ಬುಧವಾರ ಬಂಧಿತರಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ನಾಯಕ ಹೇಮಂತ್ ಸೊರೇನ್ ಅವರಿಗೆ ವಿಶೇಷ ಪಿಎಂಎಲ್ಎ ನ್ಯಾಯಾಲಯ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಿದೆ. ಅನಂತರ ಅವರನ್ನು ರಾಂಚಿಯಲ್ಲಿರುವ ಹೋಟವಾರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಹೇಮಂತ್ ಸೊರೇನ್ ಅವರಿಗೆ 10 ದಿನ ರಿಮಾಂಡ್ ವಿಧಿಸಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯದ ಅರ್ಜಿಯ ಮೇಲಿನ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತು.