ಮಹಾಯುತಿ ಸರ್ಕಾರದಿಂದ ನೀತಿಸಂಹಿತೆ ಉಲ್ಲಂಘನೆ: ಯುಬಿಟಿ ಆರೋಪ

Update: 2024-10-18 03:44 GMT

ಅಂಬಾದಾಸ್ ದಾನ್ವೇ facebook.com/iambadasdanve

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆಗೆ ಸ್ವಲ್ಪ ಮೊದಲು ಮಹಾಯುತಿ ಮೈತ್ರಿಕೂಟ ಸರ್ಕಾರ, ಹೊಸದಾಗಿ ರಚನೆಯಾದ 27 ಸರ್ಕಾರಿ ನಿಗಮಗಳಿಗೆ 50ಕ್ಕೂ ಹೆಚ್ಚು ಮಂದಿ ಬಿಜೆಪಿ, ಶಿವಸೇನೆ ಹಾಗೂ ಎನ್ ಸಿಪಿ ಕಾರ್ಯಕರ್ತರನ್ನು ನೇಮಕ ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಶಿವಸೇನೆ (ಯುಬಿಟಿ) ಆರೋಪ ಮಾಡಿದೆ.

ಈ ನೇಮಕಾತಿಗಳು ಚುನಾವಣಾ ಆಯೋಗ ಘೋಷಿಸಿರುವ ನೀತಿಸಂಹಿತೆಗಳನ್ನು ಉಲ್ಲಂಘಿಸುತ್ತದೆ ಎಂದು ಯುಬಿಟಿ ಅಭಿಪ್ರಾಯಪಟ್ಟಿದೆ. ಶಿವಸೇನಾ (ಯುಬಿಟಿ) ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೇ ಈ ಬಗ್ಗೆ ಹೇಳಿಕೆ ನೀಡಿ, ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರುವುದಾಗಿ ಪ್ರಕಟಿಸಿದ್ದಾರೆ.

"ಮಾದರಿ ನೀತಿಸಂಹಿತೆ ಘೋಷಣೆಯ ದಿನ ಮಾಡಿರುವ ಎಲ್ಲ ನೇಮಕಾತಿಗಳು ಕಾನೂನುಬಾಹಿರ. ಯಾವ ದಿನಾಂಕದಂದು ಆದೇಶಗಳನ್ನು ಹೊರಡಿಸಲಾಗಿದೆ ಎನ್ನುವುದು ಪ್ರಮುಖವಲ್ಲ. ಮಾದರಿ ನೀತಿಸಂಹಿತೆ ಘೋಷಣೆಯಾದ ಅಕ್ಟೋಬರ್ 15ರಂದು ಪ್ರಕಟಿಸಿರುವ ಆದೇಶಗಳು ಅಕ್ರಮ ಹಾಗೂ ಕಾನೂನು ಬಾಹಿರ. ಚುನಾವಣಾ ಆಯೋಗ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಂದ ಈ ಬಗ್ಗೆ ವಿವರಣೆ ಕೇಳಬೇಕು. ಪಕ್ಷವನ್ನು ತೊರೆದು ಎಂವಿಎ ಪಾಳಯವನ್ನು ಸೇರುವ ಅಂಚಿನಲ್ಲಿರುವ ಪದಾಧಿಕಾರಿಗಳನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನ ಇದು. ಆದರೆ ಈ ಹತಾಶ ಕ್ರಮಗಳು ಸರ್ಕಾರವನ್ನು ರಕ್ಷಿಸಲಾರವು" ಎಂದು ದನ್ವೇ ಹೇಳಿದರು.

ತನ್ನ ಕೊನೆಯ ಸಂಪುಟ ಸಭೆಯಲ್ಲಿ ಸರ್ಕಾರ ಬಡ ಬ್ರಾಹ್ಮಣರು ಮತ್ತು ಬಡ ರಜಪೂತರ ಕಲ್ಯಾಣಕ್ಕಾಗಿ ಎರಡು ನಿಗಮಗಳನ್ನು ಘೋಷಿಸಿತ್ತು. ಪ್ರತಿ ಸಮುದಾಯಕ್ಕೆ ತಲಾ 50 ಕೋಟಿ ರೂಪಾಯಿ ಹಂಚಿಕೆ ಮಾಡಿತ್ತು. ಮಹಾಯುತಿ ಪಕ್ಷಗಳ ಹಲವು ಮಂದಿಯನ್ನು ಇಂತಹ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News