ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕೇಂದ್ರದಿಂದ ಯುಸಿಸಿ ‘ಗೂಗ್ಲಿ’: ಸಚಿನ್ ಪೈಲಟ್

Update: 2023-07-09 15:41 GMT

ಸಚಿನ್ ಪೈಲಟ್ | Photo: PTI

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ (UCC) ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆಯೇ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಅವರು (ಕೇಂದ್ರ) ಕೇವಲ ಗಾಳಿಪಟ ಹಾರಿಸುತ್ತಿದ್ದಾರೆ, ಯುಸಿಸಿ ಕುರಿತು ಯಾವುದೇ ದೃಢವಾದ ಪ್ರಸ್ತಾವವಿಲ್ಲ ಎಂದು ಹೇಳಿದ್ದಾರೆ. ಜನರಿಗೆ ಸಂಬಂಧಿಸಿದ ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನೇತೃತ್ವದ ಕೇಂದ್ರವು ಗೂಗ್ಲಿಯನ್ನು ಎಸೆದಿದೆ ಎಂದು ಅವರು ಆರೋಪಿಸಿದ್ದಾರೆ.

ಸ್ಥಾಯಿ ಸಮಿತಿಗಳಲ್ಲಿ ಅಥವಾ ಸಂಸತ್ತಿನಲ್ಲಿ ಯುಸಿಸಿ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ ಮತ್ತು ಆ ಕುರಿತು ಮಾತುಗಳು ಕೇವಲ ರಾಜಕೀಯ ವಾಗಾಡಂಬರವನ್ನು ಆಧರಿಸಿವೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಪೈಲಟ್, ಯುಸಿಸಿ ಕುರಿತು ಯಾವುದೇ ದೃಢವಾದ ಪ್ರಸ್ತಾವವಿಲ್ಲ ಮತ್ತು ಬಿಜೆಪಿ ನೇತೃತ್ವದ ಕೇಂದ್ರವು ಅದನ್ನೊಂದು ರಾಜಕೀಯ ಸಾಧನವನ್ನಾಗಿ ಬಳಸುತ್ತಿದೆ ಅಷ್ಟೇ ಎಂದರು.

ಯುಸಿಸಿ ಕುರಿತು ನಡೆಯುತ್ತಿರುವ ಚರ್ಚೆಗಳ ಕುರಿತು ಪ್ರಶ್ನೆಗೆ ಪೈಲಟ್,‘ಅಜೆಂಡಾ ಏನು, ಮಸೂದೆ ಎಲ್ಲಿದೆ, ನಾವು ಏನನ್ನು ಚರ್ಚಿಸುತ್ತಿದ್ದೇವೆ? ಅದು ಸುಮ್ಮನೆ ಗಾಳಿಪಟ ಹಾರಿಸಿದಂತೆ. ಸಂಸತ್ತಿನಲ್ಲಿ ಅಥವಾ ಇತರೆಡೆಗಳಲ್ಲಿ ಯಾವುದೇ ಅಜೆಂಡಾ ಇಲ್ಲ. ಅದರ ವ್ಯಾಖ್ಯೆ ಏನು ’ಎಂದು ಮರುಪ್ರಶ್ನಿಸಿದರು.

‘ನಾನು ಲಿಂಗ ಸಮಾನತೆಯ ಪರವಾಗಿದ್ದೇನೆ, ವೈಯಕ್ತಿಕ ಜೀವನದಲ್ಲಿ ಅಥವಾ ಉತ್ತರಾಧಿಕಾರದಲ್ಲಿ ಜನರಿಗೆ ಎಲ್ಲ ರೀತಿಯಿಂದಲೂ ನ್ಯಾಯ ದೊರೆಯುವುದರ ಪರವಾಗಿದ್ದೇನೆ. ನಾವು ಈ ವಿಭಜಕ ಅಜೆಂಡಾದ ಬದಲು ಹೆಚ್ಚು ಮುಖ್ಯವಾಗಿರುವ ವಿಷಯಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ ’ ಎಂದು ಅವರು ಪ್ರಶ್ನಿಸಿದರು.

ನೀವು ಒಮ್ಮೆ ಟಿವಿ ಸ್ಟುಡಿಯೋಗಳಲ್ಲಿ ಪ್ರಚೋದಕ ವಿಷಯವನ್ನು ಚರ್ಚಿಸಿದರೆ ಟೊಮೆಟೊ ಬೆಲೆಗಳು ಕೆ.ಜಿ.ಗೆ 100 ರೂ.ದಾಟಿರುವ ಬಗ್ಗೆ ಮಾತನಾಡುವುದನ್ನು ಜನರು ನಿಲ್ಲಿಸುತ್ತಾರೆ. ನಿರುದ್ಯೋಗ ಸಮಸ್ಯೆ,ಹಣದುಬ್ಬರ,ಆರ್ಥಿಕತೆಯು ಎದುರಿಸುತ್ತಿರುವ ಸಮಸ್ಯೆ ಮತ್ತು ನಮ್ಮೆದುರಿನಲ್ಲಿ ಇರುವ ಎಲ್ಲ ಸವಾಲುಗಳು ನಗಣ್ಯವಾಗಿ ಬಿಡುತ್ತವೆ ಎಂದ ಪೈಲಟ್,‘ಜನರಿಗೆ ಮುಖ್ಯವಾಗಿರುವ ವಿಷಯಗಳನ್ನು ನಾವು ಮಾತನಾಡಬೇಕು. ಅದು ಹೆಚ್ಚು ಮಹತ್ವದ್ದಾಗಿದೆ. ಅವರು (ಕೇಂದ್ರ) ಗೂಗ್ಲಿಯನ್ನು ಎಸೆದಿದ್ದಾರೆ ಮತ್ತು ಆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಯುಸಿಸಿ ಪ್ರಸ್ತಾವದ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಹಣದುಬ್ಬರದ ಬಗ್ಗೆ ಯಾವುದೇ ಚರ್ಚೆ ನಡೆಯದಂತೆ ಗಮನವನ್ನು ಬೇರೆಡೆಗೆ ಸೆಳೆಯಲು ಕೇಂದ್ರ ಸರಕಾರವು ಉದ್ದೇಶಪೂರ್ವಕವಾಗಿ ಕೆಲಸ ಮಾಡುತ್ತಿದೆ ’ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News