ಯುಎಪಿಎ ಹೇರಿಕೆ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಉಮರ್ ಖಾಲಿದ್
ಹೊಸದಿಲ್ಲಿ: ತಮ್ಮ ವಿರುದ್ಧ ಹೇರಲಾಗಿರುವ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ನಿಬಂಧನೆಗಳನ್ನು ಪ್ರಶ್ನಿಸಿ ಹೋರಾಟಗಾರ ಉಮರ್ ಖಾಲಿದ್ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ರಾಜಧಾನಿಯಲ್ಲಿ 2020 ರಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಖಾಲಿದ್ ಅವರು ಯುಎಪಿಎ ಅಡಿ ಸೆಪ್ಟೆಂಬರ್ 2020ರಿಂದ ಬಂಧನದಲ್ಲಿದ್ದಾರೆ.
ಶುಕ್ರವಾರ ಸುಪ್ರೀಂ ಕೋರ್ಟಿನ ವಿಭಾಗೀಯ ಪೀಠವೊಂದು ಖಾಲಿದ್ ಅವರ ಅರ್ಜಿಯನ್ನು ಯುಎಪಿಎ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಇತರ ಅರ್ಜಿಗಳೊಂದಿಗೆ ಸೇರಿಸಿದೆ.
ತಾನು ದಿಲ್ಲಿ ಹಿಂಸಾಚಾರದಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಹಾಗೂ ಯಾವುದೇ ಸಂಚನ್ನು ಇತರ ಆರೋಪಿಗಳೊಂದಿಗೆ ಹೂಡಿಲ್ಲ ಎಂದು ಹೇಳಿ ಖಾಲಿದ್ ಅವರು ಜಾಮೀನನ್ನೂ ಕೋರಿದ್ದಾರೆ.
ಜೆಎನ್‌ಯುವಿನ ಮಾಜಿ ವಿದ್ಯಾರ್ಥಿಯಾಗಿರುವ ಉಮರ್ ಖಾಲಿದ್ ಅವರಿಗೆ ದಿಲ್ಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ ನಂತರ ಅವರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ.
ಖಾಲಿದ್ ಅವರ ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ಮೇ18ರಂದು ಮೊದಲು ಬಂದಿತ್ತು. ಅಂದಿನಿಂದ ವಿವಿಧ ಕಾರಣಗಳಿಗಾಗಿ ಆರು ಬಾರಿ ಮುಂದೂಡಲ್ಪಟ್ಟಿದೆ.