ಪಶ್ಚಿಮ ಬಂಗಾಳದ ಆಸ್ಪತ್ರೆಗಳಲ್ಲಿ ನಿಲ್ಲದ ಲೈಂಗಿಕ ದೌರ್ಜನ್ಯಗಳು | ಕರ್ತವ್ಯನಿರತ ನರ್ಸ್, ಬಾಲಕಿಗೆ ಕಿರುಕುಳ
ಕೋಲ್ಕತಾ : ಇಲ್ಲಿಯ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯ ಬಳಿಕ ದೇಶವ್ಯಾಪಿ ಪ್ರತಿಭಟನೆಗಳು ಭುಗಿಲೆದ್ದಿದ್ದರೂ ಪಶ್ಚಿಮ ಬಂಗಾಳದ ಆಸ್ಪತ್ರೆಗಳಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯಗಳು ಎಗ್ಗಿಲ್ಲದೆ ಮುಂದುವರಿದಿವೆ. ಬೀರಭೂಮ್ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಯೋರ್ವ ಕರ್ತವ್ಯನಿರತ ನರ್ಸ್‌ಗೆ ಲೈಂಗಿಕ ಕಿರುಕುಳ ನೀಡಿದ್ದರೆ,ಹೌರಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಪ್ರಯೋಗಾಲಯ ತಂತ್ರಜ್ಞನೋರ್ವ 13ರ ಹರೆಯದ ಬಾಲಕಿಗೆ ಲೈಂಗಿಕವಾಗಿ ಪೀಡಿಸಿದ್ದಾನೆ. ಇಬ್ಬರೂ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಅತಿಯಾದ ಜ್ವರದಿಂದ ಬಳಲುತ್ತಿದ್ದ ರೋಗಿಯನ್ನು ಬೀರಭೂಮ್‌ನ ಸರಕಾರಿ ಆಸ್ಪತ್ರೆಗೆ ಸ್ಟ್ರೆಚರ್‌ನಲ್ಲಿ ತರಲಾಗಿದ್ದು, ರಾತ್ರಿ ಪಾಳಿಯಲ್ಲಿದ್ದ ನರ್ಸ್ ಆತನಿಗೆ ಸಲೈನ್ ಡ್ರಿಪ್ ಏರಿಸುತ್ತಿದ್ದರು. ಈ ವೇಳೆ ಆತ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿದ್ದು ಮಾತ್ರವಲ್ಲ, ಆಕೆಯ ಕುರಿತು ಆಕ್ಷೇಪಾರ್ಹ ಭಾಷೆಯನ್ನೂ ಬಳಸಿದ್ದ.
ನರ್ಸ್ ದೂರಿನ ಮೇರೆಗೆ ಆಸ್ಪತ್ರೆ ಅಧಿಕಾರಿಗಳು ತಕ್ಷಣ ಪೋಲಿಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.
‘ರಾತ್ರಿ 8:30ರ ಸುಮಾರಿಗೆ ಅತಿಯಾದ ಜ್ವರದಿಂದ ನರಳುತ್ತಿದ್ದ ಛೋಟೊಚಕ್ ಗ್ರಾಮದ ನಿವಾಸಿ ಅಬ್ಬಾಸುದ್ದೀನ್‌ನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆತ ಬಂದ ತಕ್ಷಣ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದ. ಕೆಲವು ತಪಾಸಣೆಗಳ ಬಳಿಕ ನರ್ಸ್ ಆತನಿಗೆ ಡ್ರಿಪ್ ಹಾಕಲು ತೆರಳಿದ್ದಾಗ ಹಿಂಸಾತ್ಮಕವಾಗಿ ವರ್ತಿಸಿದ್ದ ಆತ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ. ಸಹಕರಿಸುವಂತೆ ನಾವು ರೋಗಿಯ ಕುಟುಂಬವನ್ನು ಕೇಳಿಕೊಂಡಿದ್ದೆವು. ಆದರೆ ಆತ ದುರ್ವರ್ತನೆಯನ್ನು ಮುಂದುವರಿಸಿದ್ದ. ನಾವು ಈ ಬಗ್ಗೆ ಪೋಲಿಸರು ಮತ್ತು ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಕ್ರಮವನ್ನು ತೆಗೆದುಕೊಳ್ಳದಿದ್ದರೆ ನಾವು ಕೆಲಸವನ್ನು ಸ್ಥಗಿತಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ ’ ಎಂದು ಘಟನೆ ನಡೆದಾಗ ಕರ್ತವ್ಯದಲ್ಲಿದ್ದ ಡಾ.ಮಸೀದುಲ್ ಹಸನ್ ತಿಳಿಸಿದರು.
►ಬಾಲಕಿಗೆ ಲೈಂಗಿಕ ಕಿರುಕುಳ
ಅತ್ತ ಹೌರಾದ ಆಸ್ಪತ್ರೆಯಲ್ಲಿ ನ್ಯುಮೋನಿಯಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 13ರ ಹರೆಯದ ಬಾಲಕಿಯನ್ನು ರಾತ್ರಿ 10 ಗಂಟೆಯ ಸುಮಾರಿಗೆ ಸಿಟಿ ಸ್ಕ್ಯಾನ್‌ಗೆ ಕರೆದೊಯ್ಯಲಾಗಿತ್ತು. ಲ್ಯಾಬ್‌ನಿಂದ ಅಳುತ್ತ ಹೊರಗೋಡಿ ಬಂದಿದ್ದ ಬಾಲಕಿ ಅಲ್ಲಿದ್ದ ಇನ್ನೋರ್ವ ರೋಗಿಯ ಸಂಬಂಧಿಯ ನೆರವು ಕೋರಿದ್ದಳು. ಲ್ಯಾಬ್ ಟೆಕ್ನಿಷಿಯನ್ ತನಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಆಕೆ ದೂರಿಕೊಂಡಿದ್ದಳು. ಇದನ್ನು ವೀಡಿಯೊ ಚಿತ್ರೀಕರಿಸಿಕೊಂಡಿದ್ದ ಆ ವ್ಯಕ್ತಿ ಪರಾರಿಯಾಗುತ್ತಿದ್ದ, ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮನ್ ರಾಜ್‌ನನ್ನು ಬೆನ್ನಟ್ಟಿ ಹಿಡಿದಿದ್ದ. ಈ ವೇಳೆ ಹೊರಗೆ ಕಾಯುತ್ತಿದ್ದ ಬಾಲಕಿಯ ತಾಯಿ ಧಾವಿಸಿ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಘಟನೆಯ ಸುದ್ದಿ ಕ್ಷಿಪ್ರವಾಗಿ ಹರಡಿದ್ದು, ಸ್ಥಳೀಯರಲ್ಲಿ ಆಕ್ರೋಶವನ್ನು ಸೃಷ್ಟಿಸಿತ್ತು. ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದ ಬಾಲಕಿಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆರೋಪಿಯ ಮೇಲೆ ಹಲ್ಲೆಗೆ ಮುಂದಾಗಿದ್ದರು. ಸ್ಥಳಕ್ಕೆ ಧಾವಿಸಿದ ಪೋಲಿಸರು ಆತನನ್ನು ಗುಂಪಿನಿಂದ ರಕ್ಷಿಸಿದ್ದಾರೆ. ಬಾಲಕಿಯ ಕುಟುಂಬದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.