‘ಇಂಡಿಯಾ’ ಮೈತ್ರಿಕೂಟದ 6 ಸಂಸದರು ಶಿಕ್ಷೆಗೊಳಗಾಗುವ ಸಾಧ್ಯತೆ: ತಿರುವು ಪಡೆಯಲಿದೆಯೇ ಉತ್ತರ ಪ್ರದೇಶ ಚುನಾವಣಾ ಫಲಿತಾಂಶ?

Update: 2024-06-11 11:53 GMT

PC: ANI 

ಲಕ್ನೋ: ಇಂಡಿಯಾ ಮೈತ್ರಿಕೂಟದ ಹೊಸದಾಗಿ ಚುನಾಯಿತರಾಗಿರುವ ಕನಿಷ್ಠ ಆರು ಸಂಸದರು ಮತ್ತು ಇನ್ನೋರ್ವರು ಎರಡು ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ವಿಧಿಸಬಹುದಾದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಸಂಸದರು ದೋಷನಿರ್ಣಯಕ್ಕೊಳಗಾದರೆ ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ ಎಂದು NDTV ವರದಿ ಮಾಡಿದೆ.

ಘಾಜಿಪುರ ಕ್ಷೇತ್ರದಿಂದ ಗೆದ್ದಿರುವ ಅಫ್ಝಲ್ ಅನ್ಸಾರಿ ಈಗಾಗಲೇ ಗ್ಯಾಂಗ್‌ಸ್ಟರ್ ಕಾಯ್ದೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲಹಾಬಾದ್ ಉಚ್ಚ ನ್ಯಾಯಾಲಯವು ಕಳೆದ ತಿಂಗಳು ಅವರ ಶಿಕ್ಷೆಗೆ ತಡೆ ನೀಡಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿತ್ತು. ಬೇಸಿಗೆ ರಜೆಯ ಬಳಿಕ ಜುಲೈನಲ್ಲಿ ನ್ಯಾಯಾಲಯವು ಪುನರಾರಂಭಗೊಂಡಾಗ ಅವರ ಪ್ರಕರಣದ ವಿಚಾರಣೆ ನಡೆಯಲಿದೆ. ಅಂತಿಮವಾಗಿ ನ್ಯಾಯಾಲಯವು ಶಿಕ್ಷೆಯನ್ನು ಎತ್ತಿ ಹಿಡಿದರೆ ಅನ್ಸಾರಿ ತನ್ನ ಲೋಕಸಭಾ ಸದಸ್ವತ್ಯವನ್ನು ಕಳೆದುಕೊಳ್ಳಲಿದ್ದಾರೆ.

ಅಝಂಗಡ ಕ್ಷೇತ್ರದಿಂದ ಗೆದ್ದಿರುವ ಧರ್ಮೇಂದ್ರ ಯಾದವ್ ವಿರುದ್ಧ ನಾಲ್ಕು ಪ್ರಕರಣಗಳು ಬಾಕಿಯಿವೆ ಮತ್ತು ಎರಡು ವರ್ಷಕ್ಕೂ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ಅವರೂ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳಬಹುದು.

ರಾಜಕೀಯದಲ್ಲಿ 10 ವರ್ಷಗಳ ವನವಾಸದ ಬಳಿಕ ಜೌನಪುರ ಕೇತ್ರದಿಂದ ಗೆದ್ದಿರುವ ಬಾಬು ಸಿಂಗ್ ಕುಶ್ವಾಹ್ ಮಾಯಾವತಿ ಸರಕಾರದಲ್ಲಿ ಸಚಿವರಾಗಿದ್ದಾಗ ನಡೆದಿದ್ದ ಎನ್‌ಆರ್‌ಎಚ್‌ಎಂ ಹಗರಣಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ, ಅವರ ವಿರುದ್ಧ 25 ಪ್ರಕರಣಗಳ ಪೈಕಿ ಎಂಟರಲ್ಲಿ ಆರೋಪಗಳನ್ನು ರೂಪಿಸಲಾಗಿದೆ.

ಸುಲ್ತಾನ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಮೇನಕಾ ಗಾಂಧಿಯವರ ಎದುರು ಗೆದ್ದಿರುವ ರಂಭುಲಾಲ ನಿಷಾದ್ ವಿರುದ್ಧ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಒಂದು ಸೇರಿದಂತೆ ಒಟ್ಟು ಎಂಟು ಪ್ರಕರಣಗಳಿವೆ.

ಚಂದೌಲಿ ಕ್ಷೇತ್ರದಿಂದ ಗೆದ್ದಿರುವ ವಿರೇಂದ್ರ ಸಿಂಗ್ ಅವರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಎಸ್‌ಪಿಯ ಇನ್ನೋರ್ವ ಸಂಸದರಾಗಿದ್ದಾರೆ.

ಸಹರಾನ್‌ಪುರ ಕ್ಷೇತ್ರದಿಂದ ಗೆದ್ದಿರುವ ಕಾಂಗ್ರೆಸ್‌ನ ಇಮ್ರಾನ್ ಮಸೂದ್ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಜಾರಿ ನಿರ್ದೇಶನಾಲಯವು ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವೂ ಸೇರಿದೆ. ಎರಡು ಪ್ರಕರಣಗಳಲ್ಲಿ ಅವರ ವಿರುದ್ಧ ಆರೋಪಗಳನ್ನು ರೂಪಿಸಲಾಗಿದೆ.

ನಗಿನಾ ಮೀಸಲು ಕ್ಷೇತ್ರದಿಂದ ಗೆದ್ದಿರುವ ಆಝಾದ್ ಸಮಾಜ್ ಪಾರ್ಟಿಯ ಚಂದ್ರಶೇಖರ ಆಝಾದ್ ವಿರುದ್ಧ ೩೦ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಯಾವುದೇ ಒಂದು ಪ್ರಕರಣದಲ್ಲಿ ಎರಡು ವರ್ಷಗಳಿಗೂ ಹೆಚ್ಚಿನ ಜೈಲು ಶಿಕ್ಷೆಯಾದರೆ ಅದು ಅವರ ರಾಜಕೀಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಬಳಿಕ ಹಲವಾರು ರಾಜಕೀಯ ನಾಯಕರು ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಈ ಪೈಕಿ ಮುಹಮ್ಮದ್ ಅಝಂ ಖಾನ್ ಮತ್ತು ಅವರ ಪುತ್ರ ಅಬ್ದುಲ್ಲಾ ಅಝಂ (ಎಸ್‌ಪಿ),ಖಬೂ ತಿವಾರಿ,ವಿಕ್ರಮ ಸೈನಿ,ರಾಮದುಲಾರ ಗೊಂಡ,ಕುಲ್ದೀಪ್ ಸೆಂಗರ್ ಮತ್ತು ಅಶೋಕ ಚಂದೇಲ್ (ಎಲ್ಲರೂ ಬಿಜೆಪಿ) ಪ್ರಮುಖರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News