ಉತ್ತರ ಪ್ರದೇಶ: ಗ್ಯಾಂಗ್ ಸ್ಟರ್ ಅರ್ಶದ್, ಮೂವರು ಸಹಚರರು ಪೊಲೀಸ್ ಎನ್ ಕೌಂಟರಿನಲ್ಲಿ ಹತ್ಯೆ

Update: 2025-01-21 10:57 IST
Photo of place where police encounter

Screengrab:X/@ANI

  • whatsapp icon

ಲಕ್ನೊ: ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಪೊಲೀಸರು ನಾಲ್ವರು ಕ್ರಿಮಿನಲ್ ಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆ ಸೋಮವಾರ ಮಧ್ಯರಾತ್ರಿ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

ಈ ಎನ್ ಕೌಂಟರ್ ಶಾಮ್ಲಿ ಜಿಲ್ಲೆಯ ಝಿಂಝಿನಾ ಪ್ರದೇಶದಲ್ಲಿ ನಡೆದಿದ್ದು, ಗುಂಡಿನ ಚಕಮಕಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ.

ಎನ್ ಕೌಂಟರ್ ನಲ್ಲಿ ಹತರಾದ ಮೂವರನ್ನು ಮುಸ್ತಫಾ ಕಗ್ಗ ಗುಂಪಿನ ಸದಸ್ಯರಾದ ಅರ್ಶದ್ ಹಾಗೂ ಆತನ ಸಹಚರರಾದ ಮಂಜೀತ್ ಹಾಗೂ ಸತೀಶ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬನ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್, “ಮೀರತ್ ವಿಶೇಷ ಕಾರ್ಯಪಡೆ ತಂಡದೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡು ಅವರೆಲ್ಲ ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಇನ್ಸ್ ಪೆಕ್ಟರ್ ಸುನೀಲ್, ಗುಂಡಿನ ಚಕಮಕಿಯ ವೇಳೆ ಗಾಯಗೊಂಡಿದ್ದು, ಅವರನ್ನು ಸದ್ಯ ಗುರುಗ್ರಾಮದ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಸಹರಣ್ ಪುರ್ ನಲ್ಲಿನ ಬೇಹತ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದಲ್ಲಿ ಅರ್ಶದ್ ಪೊಲೀಸರಿಗೆ ಬೇಕಿದ್ದ. ಆತನನ್ನು ಸೆರೆ ಹಿಡಿಯುವವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಇದಲ್ಲದೆ, ಅರ್ಶದ್ ವಿರುದ್ಧ ದರೋಡೆ, ಡಕಾಯಿತಿ ಹಾಗೂ ಹತ್ಯೆಯಂಥ ವಿವಿಧ ಪ್ರಕರಣಗಳೂ ಇದ್ದವು ಎನ್ನಲಾಗಿದೆ.

ಈ ಪ್ರಕರಣದ ಮುಂದಿನ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News