ಕನ್ವರ್ ಯಾತ್ರೆ ಆದೇಶ ಸಮರ್ಥಿಸಿ ಸುಪ್ರೀಂ ಕೋರ್ಟ್‌ಗೆ ಉತ್ತರ ಸಲ್ಲಿಸಿದ ಉತ್ತರ ಪ್ರದೇಶ
ಹೊಸದಿಲ್ಲಿ:ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಎಲ್ಲಾ ಮಳಿಗೆಗಳ ಮಾಲಕರು ತಮ್ಮ ಹೆಸರುಗಳನ್ನು ಪ್ರದರ್ಶಿಸಬೇಕು ಎಂದು ತಾನು ನೀಡಿರುವ ಆದೇಶವನ್ನು ವಿರೋಧಿಸಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಉತ್ತರ ಪ್ರದೇಶ ಸರ್ಕಾರ ತೀವ್ರವಾಗಿ ವಿರೋಧಿಸಿದೆ.
ತೀರ್ಥಯಾತ್ರೆ ಶಾಂತಿಯುತ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿತ್ತು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವಿಸ್ತೃತ ವಿವರದಲ್ಲಿ ರಾಜ್ಯ ಸರ್ಕಾರ ಹೇಳಿದೆ.
ಅಂಗಡಿಗಳು ಮತ್ತು ಆಹಾರ ಮಳಿಗೆಗಳ ಹೆಸರುಗಳಿಂದಾಗಿ ಉದ್ಭವಿಸಿರುವ ಗೊಂದಲದ ಕುರಿತಂತೆ ಕನ್ವರಿಯಾಗಳಿಂದ ಬಂದ ದೂರುಗಳನ್ನಾಧರಿಸಿ ಈ ಆದೇಶ ಹೊರಡಿಸಲಾಗಿತ್ತು ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದೆ.
“ಈ ಯಾತ್ರೆ ಒಂದು ಕಷ್ಟಕರ ಪಯಣ, ಕೆಲ ಕನ್ವರಿಯಾಗಳು, ಅಂದರೆ ಡಾಕ್ ಕನ್ವರಿಯಾಗಳು ಕನ್ವರ್ ತಮ್ಮ ಹೆಗಲಲ್ಲಿದ್ದ ನಂತರ ಒಮ್ಮೆಯೂ ವಿರಮಿಸುವುದಿಲ್ಲ. ಗಂಗಾಜಲದೊಂದಿಗೆ ಕನ್ವರ್ ಅನ್ನು ಒಮ್ಮೆ ತುಂಬಿಸಿದ ನಂತರ ಅದನ್ನು ನೆಲದಲ್ಲಿರಿಸಲಾಗುವುದಿಲ್ಲ, ಅಥವಾ ಗುಲರ್ ಮರದ ನೆರಳಿನಲ್ಲಿರಿಸಲಾಗದು ಎಂಬಂತಹ ಕೆಲ ನಿಯಮಗಳಿವೆ. ವರ್ಷಗಳ ತಯಾರಿಯ ನಂತರ ಈ ಯಾತ್ರೆ ಕೈಗೊಳ್ಳುತ್ತಾರೆ,” ಎಂದು ಸುಪ್ರೀಂ ಕೋರ್ಟ್‌ಗೆ ನೀಡಿರುವ ಉತ್ತರದಲ್ಲಿ ಸರ್ಕಾರ ಹೇಳಿದೆ.
ರಾಜ್ಯ ಸರ್ಕಾರದ ಸೂಚನೆಯ ಧಾರ್ಮಿಕ ಕಂದರ ಉಂಟು ಮಾಡುವ ಉದ್ದೇಶ ಹೊಂದಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.