ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮಂಡಳಿಯ ಅಧ್ಯಕ್ಷರ ವಜಾ
ಹೊಸ ದಿಲ್ಲಿ: ಪೊಲೀಸ್ ನೇಮಕಾತಿಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮಂಡಳಿಯ ಅಧ್ಯಕ್ಷರನ್ನು ಉತ್ತರ ಪ್ರದೇಶ ಸರಕಾರವು ವಜಾಗೊಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಯು ರದ್ದುಗೊಂಡ ಬೆನ್ನಿಗೇ, ಪೊಲೀಸ್ ನೇಮಕಾತಿ ಮಂಡಳಿಯ ಅಧ್ಯಕ್ಷೆ ರೇಣುಕಾ ಶರ್ಮ ಬದಲಿಗೆ ಐಪಿಎಸ್ ಅಧಿಕಾರಿ ರಾಜೀವ್ ಕೃಷ್ಣಾರನ್ನು ನೇಮಿಸಲಾಗಿದೆ.
ರಾಜ್ಯದಾದ್ಯಂತ ಫೆಬ್ರವರಿ 17 ಮತ್ತು 18ರಂದು ನಡೆದಿದ್ದ ಪರೀಕ್ಷೆಗೆ 48 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.
ಆದರೆ, ಫೆಬ್ರವರಿ 24ರಂದು ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಿದ್ದ ರಾಜ್ಯ ಸರಕಾರವು, ಮರು ಪರೀಕ್ಷೆಯನ್ನು ಇನ್ನು ಆರು ತಿಂಗಳೊಳಗಾಗಿ ನಡೆಸಲಾಗುವುದು ಎಂದು ಪ್ರಕಟಿಸಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು ಕುರಿತು ವಿಶೇಷ ಕಾರ್ಯಪಡೆಯು ತನಿಖೆ ನಡೆಸಲಿದೆ ಎಂದೂ ಉತ್ತರ ಪ್ರದೇಶ ಸರಕಾರ ಹೇಳಿತ್ತು.