ಉತ್ತರ ಪ್ರದೇಶದಲ್ಲಿ ಮುಂದುವರಿದ ತೋಳಗಳ ಉಪಟಳ | ಬಹ್ರೈಚ್ ನಲ್ಲಿ ತೋಳದ ದಾಳಿಯಿಂದ ಮಹಿಳೆಗೆ ಗಾಯ
ಬಹ್ರೈಚ್ (ಉತ್ತರ ಪ್ರದೇಶ) : ತಡರಾತ್ರಿ ತೋಳ ನಡೆಸಿರುವ ದಾಳಿಯಲ್ಲಿ 50 ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಹ್ರೈಚ್ನ ಮಹ್ಸಿ ತೆಹ್ಸಿಲ್ ಗ್ರಾಮದಲ್ಲಿ ನಡೆದಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಘಟನೆಯು ಬುಧವಾರ ರಾತ್ರಿ ಸುಮಾರು 10.30 ಗಂಟೆಗೆ ಭವಾನಿ ಪುರ್ ನ ಕೋವಿನ್ ಪುರ ಗ್ರಾಮದಲ್ಲಿ ನಡೆದಿದೆ ಎಂದು ಬಹ್ರೈಚ್ ವಲಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಮಹಿಳೆಯ ಅಳಿಯ ದಿನೇಶ್ ಪ್ರಕಾರ, ಘಟನೆ ನಡೆದಾಗ, ಪುಷ್ಪಾ ದೇವಿ ತಮ್ಮ ಕುಟುಂಬದ ಸದಸ್ಯರೊಂದಿಗೆ ನಿದ್ರೆಗೆ ಜಾರಿದ್ದರು ಎನ್ನಲಾಗಿದೆ. ಮಗುವೊಂದು ಮನೆಯ ಬಾಗಿಲನ್ನು ತೆರೆದು ಬಿಟ್ಟಿದ್ದುದರಿಂದ, ಮನೆಯೊಳಗೆ ಪ್ರವೇಶಿಸಿದ ತೋಳ ದಾಳಿ ನಡೆಸಿತು ಎಂದು ಅವರು ಹೇಳಿದ್ದಾರೆ.
ಮಹಿಳೆಯು ಕಿರುಚಿಕೊಳ್ಳುತ್ತಿರುವ ಸದ್ದನ್ನು ಕೇಳಿದ ಆಕೆಯ ಸೊಸೆ ಮತ್ತಿತರರು ಆಕೆಯ ಕೋಣೆಗೆ ಧಾವಿಸಿದಾಗ, ಆಕೆ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿತು ಎಂದು ಅವರು ತಿಳಿಸಿದ್ದಾರೆ. ಸ್ಥಳೀಯರೂ ಕೂಡಾ ಸದ್ದನ್ನು ಕೇಳಿ ಘಟನಾ ಸ್ಥಳಕ್ಕೆ ಧಾವಿಸಿದ್ದು, ಜನರ ಗುಂಪನ್ನು ಕಂಡ ತೋಳವು ಕಬ್ಬಿನ ಗದ್ದೆಯೊಳಹೊಕ್ಕು ಪರಾರಿಯಾಯಿತು ಎಂದು ದಿನೇಶ್ ತಿಳಿಸಿದ್ದಾರೆ.
ಆರಂಭದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ಮಹ್ಸಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ನಂತರ ಆಕೆಯನ್ನು ಬಹ್ರೈಚ್ ನ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಎಂದು ಬಹ್ರೈಚ್ ವಲಯ ಅರಣ್ಯಾಧಿಕಾರಿ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
ಸ್ಥಳೀಯರು ಗುರುತಿಸಿದ ಸ್ಥಳಗಳಲ್ಲಿ ಡ್ರೋನ್ ಗಳನ್ನು ಬಳಸಿ ಮೂರು ರಕ್ಷಣಾ ತಂಡಗಳು ಕಾರ್ಯಾಚರಣೆ ಮಾಡುತ್ತಿವೆ. ಗ್ರಾಮಸ್ಥರು ರಾತ್ರಿ ವೇಳೆ ಮನೆಯೊಳಗೆ ಇರುವಂತೆ ಜಾಗೃತಿ ಮೂಡಿಸಲು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ. ಸೂಕ್ಷ್ಮ ವಲಯಗಳಲ್ಲಿ ಪಟಾಕಿಗಳನ್ನು ಸಿಡಿಸುವ ಮೂಲಕ ಜನನಿಬಿಡ ಪ್ರದೇಶಗಳಿಂದ ತೋಳವನ್ನು ಓಡಿಸುವ ಪ್ರಯತ್ನಗಳಿಗೂ ಚಾಲನೆ ನೀಡಲಾಗಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ, ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ತೋಳಗಳ ದಾಳಿಯು ಮಹ್ಸಿ ತಾಲೂಕಿನ ಎರಡು ಗ್ರಾಮಗಳಿಂದ ವರದಿಯಾಗಿದ್ದವು. ಈ ದಾಳಿಯಲ್ಲಿ 11 ವರ್ಷ ಮತ್ತು 10 ವರ್ಷದ ಇಬ್ಬರು ಬಾಲಕಿಯರು ಗಾಯಗೊಂಡಿದ್ದರು.