ಯುಪಿಎಸ್ಸಿ ಮೂಲಕ ಲ್ಯಾಟರಲ್ ಎಂಟ್ರಿಗೆ ಕೇಂದ್ರದ ಒತ್ತು: ಪ್ರತಿಪಕ್ಷಗಳ ಟೀಕೆ

Update: 2024-08-18 10:55 GMT

Photo : ThePrint

ಹೊಸದಿಲ್ಲಿ: ಲ್ಯಾಟರಲ್ ಎಂಟ್ರಿ ಮೂಲಕ ವಿವಿಧ ಸಚಿವಾಲಯಗಳು/ಇಲಾಖೆಗಳಲ್ಲಿಯ ಜಂಟಿ ಕಾರ್ಯದರ್ಶಿ, ಉಪಕಾರ್ಯದರ್ಶಿ ಮತ್ತು ನಿರ್ದೇಶಕರ 45 ಹುದ್ದೆಗಳನ್ನು ಭರ್ತಿ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರವು ಸಾಕಷ್ಟು ರಾಜಕೀಯ ವಿವಾದವನ್ನು ಸೃಷ್ಟಿಸಿದೆ.

24 ಕೇಂದ್ರ ಸಚಿವಾಲಯಗಳಲ್ಲಿ 10 ಜಂಟಿ ಕಾರ್ಯದರ್ಶಿಗಳು ಮತ್ತು 35 ನಿರ್ದೇಶಕರು/ಉಪ ಕಾರ್ಯದರ್ಶಿಗಳ ಹುದ್ದೆಗಳಿಗೆ ನೇಮಕಾತಿಗಾಗಿ ಯುಪಿಎಸ್ಸಿ ಶನಿವಾರ ಜಾಹೀರಾತು ಪ್ರಕಟಿಸಿತ್ತು.

ಕಾಂಗ್ರೆಸ್ ಮತ್ತು ಆರ್ಜೆಡಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಸರಕಾರದ ಈ ನಡೆಯನ್ನು ಕಟುವಾಗಿ ಟೀಕಿಸಿವೆ.

ಸರಕಾರದ ನಿರ್ಧಾರವನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅದನ್ನು ಮೀಸಲಾತಿ ವ್ಯವಸ್ಥೆಯ ಮೇಲಿನ ಇಮ್ಮಡಿ ದಾಳಿ ಎಂದು ಬಣ್ಣಿಸಿದ್ದಾರೆ. ಸರಕಾರವು ಈ ಹುದ್ದೆಗಳನ್ನು ಲ್ಯಾಟರಲ್ ಎಂಟ್ರಿ ಮೂಲಕ ಭರ್ತಿ ಮಾಡಲು ಎಸ್ಸಿ/ಎಸ್ಟಿಗಳು,ಒಬಿಸಿಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿರುವ ಮೀಸಲಾತಿ ನಿಬಂಧನೆಗಳನ್ನು ಉದ್ದೇಶಪೂರ್ವಕವಾಗಿ ಉಪೇಕ್ಷಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ಭಾವನೆಗಳನ್ನು ವ್ಯಕ್ತಪಡಿಸಿರುವ ಆರ್ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ ಅವರು,ಕೇಂದ್ರದ ನಿರ್ಧಾರವು ಸಂವಿಧಾನ ಕುರಿತು ‘ಕೊಳಕು ಹಾಸ್ಯವಾಗಿದೆ ಎಂದು ಬಣ್ಣಿಸಿದ್ದು,ಸರಕಾರವು ಶೋಷಿತ ಸಮುದಾಯಗಳ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮೀಸಲಾತಿ ವ್ಯವಸ್ಥೆಯನ್ನು ನಾಶಗೊಳಿಸಲು ಸರಕಾರದ ವ್ಯವಸ್ಥಿತ ಪ್ರಯತ್ನಗಳನ್ನು ಗುರುತಿಸುವಂತೆ ಮತ್ತು ವಿರೋಧಿಸುವಂತೆ ಅವರು ಈ ಸಮುದಾಯಗಳ ಜನರನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News