ಉತ್ತರ ಪ್ರದೇಶ | ಬುಲ್ಡೋಝರ್ ಕಾರ್ಯಾಚರಣೆ ಭೀತಿ ; ಅಂಗಡಿ ತೆರವುಗೊಳಿಸುತ್ತಿರುವ ಮಾಲಕರು
ಲಕ್ನೋ : ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯ ಮಹಾರಾಜ್‌ಗಂಜ್ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕೆಲವು ಅಂಗಡಿಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ನೋಟಿಸು ಜಾರಿ ಮಾಡಿದ ಹಿನ್ನೆಲೆಯಲ್ಲಿ ಅಂಗಡಿ ಮಾಲಿಕರು ತಮ್ಮ ಅಂಗಡಿಯ ಭಾಗಗಳನ್ನು ಕೆಡವಲು ಆರಂಭಿಸಿದ್ದಾರೆ.
ಲೋಕೋಪಯೋಗಿ ಇಲಾಖೆ 23 ಅಂಗಡಿಗಳಿಗೆ ನೋಟಿಸು ಜಾರಿ ಮಾಡಿದೆ. ಇದರಲ್ಲಿ 20 ಅಂಗಡಿಗಳು ಮುಸ್ಲಿಮರಿಗೆ ಸೇರಿವೆ.
ಇತ್ತೀಚೆಗೆ ಬಹ್ರೈಚ್ ನ ಮಹಾರಾಜಗಂಜ್‌ನಲ್ಲಿ ದುರ್ಗಾ ಮೂರ್ತಿಯ ಮೆರವಣಿಗೆ ಸಂದರ್ಭ ಕೋಮು ಹಿಂಸಾಚಾರ ಸಂಭವಿಸಿತ್ತು. ಈ ಹಿಂಸಾಚಾರದಲ್ಲಿ 22 ವರ್ಷದ ರಾಮ್ ಗೋಪಾಲ್ ಮಿಶ್ರಾ ಗುಂಡು ತಗುಲಿ ಸಾವನ್ನಪ್ಪಿದ್ದ.
ಈ ಘಟನೆ ಬಳಿಕ ಸ್ಥಳೀಯ ಆಡಳಿತ ಈ ಪ್ರದೇಶದಲ್ಲಿ ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡು ನಿರ್ಮಿಸಿರುವ ಮನೆ, ಅಂಗಡಿಗಳ ತೆರವಿಗೆ ನಿರ್ಧರಿಸಿದೆ. ಇದರಲ್ಲಿ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪಿಗಳ ಮನೆ, ಅಂಗಡಿಗಳು ಕೂಡ ಸೇರಿವೆ.
ಅಂಗಡಿ ಮಾಲಿಕರು ಬುಲ್ಜೋಝರ್ ಕಾರ್ಯಾಚರಣೆಯ ಭೀತಿಯಿಂದ ತಮ್ಮ ಅಂಗಡಿಗಳನ್ನು ಖಾಲಿ ಮಾಡುತ್ತಿದ್ದಾರೆ. ಅಲ್ಲದೆ ಅಂಗಡಿಯ ಅಕ್ರಮ ಭಾಗಗಳನ್ನು ತಾವಾಗಿಯೇ ನೆಲಸಮಗೊಳಿಸುತ್ತಿದ್ದಾರೆ. ಸರಕಾರದ ಬುಲ್ಡೋಝರ್ ತಮ್ಮ ಅಂಗಡಿಯನ್ನು ಪೂರ್ಣವಾಗಿ ನೆಲಸಮ ಮಾಡುವುದನ್ನು ತಪ್ಪಿಸಲು ಅವರು ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಓರ್ವ ಅಂಗಡಿ ಮಾಲಿಕ, ‘‘ಬುಲ್ಡೋಝರ್ ಬರುವವರೆಗೆ ಕಾಯುವುದಕ್ಕಿಂತ, ಅಕ್ರಮ ಭಾಗಗಳನ್ನು ನಾವಾಗಿಯೇ ತೆರವುಗೊಳಿಸುವುದು ಉತ್ತಮ’’ ಎಂದಿದ್ದಾರೆ.
ಈ ಬೆಳವಣಿಗೆ ಕುರಿತಂತೆ ಧರ್ಮದ ಕಾರಣಕ್ಕೆ ಅವರನ್ನು ಗುರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಈ ಆರೋಪವನ್ನು ಮಹ್ಸಿಯ ಶಾಸಕ ಸುರೇಶ್ವರ್ ಸಿಂಗ್ ನಿರಾಕರಿಸಿದ್ದಾರೆ.