ಉತ್ತರ ಪ್ರದೇಶ | ದಲಿತ ಪೇದೆಯ ಮದುವೆ ಮೆರವಣಿಗೆ ಮೇಲೆ ಸವರ್ಣಿಯರಿಂದ ದಾಳಿ; ಹಲವರಿಗೆ ಗಾಯ
ಮೀರತ್: ದಲಿತ ಪೇದೆಯ ಮದುವೆ ಮೆರವಣಿಗೆ ಮೇಲೆ ಸವರ್ಣಿಯರ ಗುಂಪೊಂದು ದಾಳಿ ನಡೆಸಿರುವ ಘಟನೆ ಬುಲಂದ್ ಶಹರ್ ನಲ್ಲಿ ನಡೆದಿದ್ದು, ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಾಝಿಯಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ರಾಬಿನ್ ಸಿಂಗ್(31) ಅವರಿಗೆ ಲಖಾವತಿಯ ಪೇದೆಯೋರ್ವರ ಜೊತೆ ವಿವಾಹ ನಡೆದಿದೆ. ವಿವಾಹದ ಬಳಿಕ ಮದುವೆ ಮೆರವಣಿಗೆ ಆಯೋಜಿಸಲಾಗಿದೆ. ಈ ವೇಳೆ ತಮ್ಮ ಕೇರಿಯಲ್ಲಿ ದಲಿತ ವರ ಮದುವೆ ಮೆರವಣಿಗೆ ನಡೆಸದಂತೆ ಸವರ್ಣೀಯರು ತಡೆದಿದ್ದು, ಕಲ್ಲು ತೂರಾಟವನ್ನು ನಡೆಸಿದ್ದಾರೆ. ಕಲ್ಲು ತೂರಾಟ ಮತ್ತು ದಾಳಿಯಿಂದ ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲವರು ಗಾಯಗೊಂಡಿದ್ದಾರೆ.
ಈ ಕುರಿತು ವರನ ತಂದೆ ನಂದ್ರಾಮ್ ಅವರು ಪ್ರತಿಕ್ರಿಯಿಸಿದ್ದು, ರಾತ್ರಿ 8 ಗಂಟೆ ಸುಮಾರಿಗೆ ಜಹಾಂಗೀರಾಬಾದ್ ಪ್ರದೇಶದ ಟಿಟೋನಾ ಗ್ರಾಮದಲ್ಲಿ ಮದುವೆ ಮೆರವಣಿಗೆ ಸಾಗುತ್ತಿದ್ದಾಗ ಠಾಕೂರ್ ಸಮುದಾಯಕ್ಕೆ ಸೇರಿದ 20 ರಿಂದ 25 ಮಂದಿ ಮೆರವಣಿಗೆಯನ್ನು ತಡೆದಿದ್ದಾರೆ. ಡಿಜೆ ಸಂಗೀತದೊಂದಿಗೆ ನಮ್ಮ ಕೇರಿಯಲ್ಲಿ ಮದುವೆ ಮೆರವಣಿಗೆ ಸಾಗದಂತೆ ಅವರು ಆಕ್ಷೇಪಿಸಿದ್ದಾರೆ. ಅವರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ ವರನನ್ನು ಕುದುರೆ ಮೇಲಿನಿಂದ ಕೆಳಗಿಳಿಸಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವರಿಗೆ ಗಾಯವಾಗಿದ್ದು, ನನ್ನ ಪುತ್ರ ಸ್ವಲ್ಪದರಲ್ಲೇ ಪಾರಾಗಿದ್ದಾನೆ ಎಂದು ಹೇಳಿದ್ದಾರೆ,.
ಈ ಕುರಿತು ಗ್ರಾಮೀಣ ಎಸ್ಪಿ ರೋಹಿತ್ ಮಿಶ್ರಾ ಅವರು ಪ್ರತಿಕ್ರಿಯಿಸಿದ್ದು, ಮದುವೆ ಮೆರವಣಿಗೆಯಲ್ಲಿ ಜೋರಾಗಿ ಡಿಜೆ ಹಾಕಿದ್ದಕ್ಕೆ ಸಂಬಂಧಿಸಿ ಜಗಳವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಘಟನೆ ಸಂಬಂಧಿಸಿ ಗಲಭೆ, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.