ಉತ್ತರಪ್ರದೇಶ: ಬಿಜೆಪಿ ಶಾಸಕನ ನಿವಾಸದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Update: 2023-09-25 17:10 GMT

ಯೋಗೇಶ್ ಶುಕ್ಲಾ| Photo: scroll.in

ಹೊಸದಿಲ್ಲಿ: ಬಿಜೆಪಿ ಶಾಸಕನ ಲಕ್ನೊದಲ್ಲಿರುವ ಅಧಿಕೃತ ನಿವಾಸದಲ್ಲಿ 25 ವರ್ಷದ ವ್ಯಕ್ತಿಯೋರ್ವನ ಮೃತದೇಹವನ್ನು ಉತ್ತರಪ್ರದೇಶ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ಸೋಮವಾರ ವರದಿ ಮಾಡಿದೆ. ಈ ವ್ಯಕ್ತಿಯನ್ನು ಶ್ರೇಷ್ಠ ತಿವಾರಿ ಎಂದು ಗುರುತಿಸಲಾಗಿದೆ.

ಈತ ಶಾಸಕ ಯೋಗೇಶ್ ಶುಕ್ಲಾ ಅವರ ಮಾಧ್ಯಮ ತಂಡದ ಸದಸ್ಯ. ತಿವಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದರೆ, ಪೊಲೀಸರಿಗೆ ಸುಸೈಡ್ ನೋಟ್ ಪತ್ತೆಯಾಗಿಲ್ಲ. ಆತ ತನಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ ಎಂದು ತಿವಾರಿಯ ಸಂಬಂಧಿಕರೊಬ್ಬರು ಸೆಪ್ಟಂಬರ್ 23ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಅನಂತರ ಪೊಲೀಸರ ತಂಡ ಶಾಸಕರ ಫ್ಲಾಟ್ ಗೆ ಧಾವಿಸಿತು. ಫ್ಲಾಟ್ ಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲವು ಬಾರಿ ಬಾಗಿಲು ಬಡಿದರೂ ಯಾರೊಬ್ಬರೂ ಪ್ರತಿಕ್ರಿಯೆ ನೀಡಲಿಲ್ಲ. ಅನಂತರ ಪೊಲೀಸರು ಬಾಗಿಲ ಒಡೆದಾಗ ಮೃತದೇಹ ಪತ್ತೆಯಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ತಿವಾರಿ ಅವರು ಬಾರಾಬಂಕಿ ಜಿಲ್ಲೆಯ ಹೈದರ್ಗಢ ಪ್ರದೇಶದವರು. ಅವರು ಲಕ್ನೋದಲ್ಲಿ ಬಾಡಿಗೆ ಪ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದರು. ತಿವಾರಿ ಅವರ ಸಾವಿನ ಕಾರಣವನ್ನು ಪತ್ತೆ ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News