ಉತ್ತರಾಖಂಡ | ‘ಲವ್ ಜಿಹಾದ್’ವಿವಾದದ ಬಳಿಕ ಪುರೋಲಾದಲ್ಲಿ ಬದುಕಿದ್ದರೂ ಸತ್ತಂತಿರುವ ಮುಸ್ಲಿಂ ಕುಟುಂಬಗಳು

Update: 2024-07-22 15:11 GMT

ಸಾಂದರ್ಭಿಕ ಚಿತ್ರ | PC : scroll.in

ಹೊಸದಿಲ್ಲಿ : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಬೆಟ್ಟಗಳ ನಡುವಿನ ಪುರೋಲಾ ಎಂಬ ಪುಟ್ಟ ಪಟ್ಟಣದಲ್ಲಿ ಕಳೆದ ವರ್ಷದ ‘ಲವ್ ಜಿಹಾದ್’ ಗದ್ದಲದ ಬಳಿಕ ಮೇಲ್ನೋಟಕ್ಕೆ ಜನಜೀವನವು ಸಾಮಾನ್ಯ ಸ್ಥಿತಿಗೆ ಮರಳಿರುವಂತೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಪರಿಚಿತ ಮುಖಗಳು ಕಾಣುತ್ತಿದ್ದು, ಚಟುವಟಿಕೆಗಳಿಂದ ಗಿಜಿಗುಡುತ್ತಿದೆ. ಕಳೆದ ವರ್ಷ ಪ್ರತಿಭಟನೆಗಳು ಮತ್ತು ಮುಚ್ಚಿದ ಅಂಗಡಿಗಳಿಗೆ ಈ ಪಟ್ಟಣ ಸಾಕ್ಷಿಯಾಗಿದ್ದರೆ, ಇಂದು ಪರಿಸ್ಥಿತಿ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.

ಆದರೆ ಹತ್ತಾರು ಕುಟುಂಬಗಳು ಅನುಭವಿಸಿದ್ದ ಆಘಾತದ ಗಾಯಗಳು ಒಳಗಿಂದೊಳಗೆ ಇನ್ನೂ ಹಸಿಯಾಗಿಯೇ ಇವೆ. ಈ ಪಟ್ಟಣದಲ್ಲಿ ದಶಕಗಳಿಂದಲೂ ವಾಸವಾಗಿದ್ದು ಹೊಟ್ಟೆಪಾಡಿಗಾಗಿ ವ್ಯಾಪಾರ-ವಹಿವಾಟುಗಳನ್ನು ನಡೆಸುತ್ತಿದ್ದ ಕುಟುಂಬಗಳು ನ್ಯಾಯಾಲಯದಲ್ಲಿ ರುಜುವಾತಾಗದ ಒಂದೇ ಒಂದು ಆರೋಪದಿಂದಾಗಿ ಊರನ್ನೇ ತೊರೆದು ಹೋಗುವಂತಾಗಿತ್ತು. ‘ಹೊರಗಿನವರ’ ವಿರುದ್ಧ ಈ ಪಟ್ಟಣದಲ್ಲಿ ಉಂಟಾಗಿದ್ದ ಆಕ್ರೋಶವನ್ನು ಎದುರಿಸಲು ಈ ಕುಟುಂಬಗಳಿಗೆ ಸಾಧ್ಯವಾಗಿರಲಿಲ್ಲ.

ಕಳೆದ ವರ್ಷ ಮೇ26ರಂದು 14ರ ಹರೆಯದ ಬಾಲಕಿಯನ್ನು ಉಬೈದ್ ಖಾನ್(25) ಮತ್ತು ಜಿತೇಂದ್ರ ಸೈನಿ(24) ಎನ್ನುವವರು ತನ್ನ ಸೋದರಸೊಸೆಯನ್ನು ಅಪಹರಿಸಲು ಯತ್ನಿಸಿದ್ದರು ಎಂದು ಸೋದರಮಾವ ಆರೋಪಿಸಿದ್ದು, ಇದು ಪುರೋಲಾದಲ್ಲಿ ಅಶಾಂತಿ ಭುಗಿಲೇಳಲು ಕಾರಣವಾಗಿತ್ತು. ‘ಲವ್ ಜಿಹಾದ್’ನ ಆರೋಪಗಳು ಪಟ್ಟಣದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದವು.

ಬಲಪಂಥೀಯ ಗುಂಪುಗಳು, ಸ್ಥಳೀಯ ವ್ಯಾಪಾರಿಗಳ ಸಂಘಟನೆ ಮತ್ತು ಕೆಲವು ನಿವಾಸಿಗಳು ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕರೆ ನೀಡಲಾಗಿತ್ತು. ‘ಹೊರಗಿನವರ’ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಮ್ಮ ಅಂಗಡಿಗಳನ್ನು ಮುಚ್ಚದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮುಸ್ಲಿಮ್ ವ್ಯಾಪಾರಿಗಳಿಗೆ ಬೆದರಿಕೆಯೊಡ್ಡುವ ಪೋಸ್ಟರ್ಗಳು ರಾತ್ರೋರಾತ್ರಿ ಕಾಣಿಸಿಕೊಂಡಿದ್ದವು.

ಆದರೆ ಪ್ರಕರಣವು ನ್ಯಾಯಾಲಯದಲ್ಲಿ ಠುಸ್ ಎಂದಿತ್ತು. ತನ್ನ ನೆರೆಕರೆ ನಿವಾಸಿ ಆಶಿಷ್ ಚುನರ್ ಎಂಬಾತ ಹೇಳಿದ್ದನ್ನೇ ನಂಬಿಕೊಂಡು ತಾನು ದೂರು ಸಲ್ಲಿಸಿದ್ದಾಗಿ ಬಾಲಕಿಯ ಸೋದರಮಾವ ಒಪ್ಪಿಕೊಂಡಿದ್ದ. ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿದ್ದ ಚುನರ್ ನ್ಯಾಯಾಲಯದಲ್ಲಿ ಆರೋಪಿಗಳನ್ನು ಗುರುತಿಸಲು ವಿಫಲಗೊಂಡಿದ್ದ ಮತ್ತು ಅವರು ಬಾಲಕಿಯನ್ನು ಎಲ್ಲಿಗಾದರೂ ಕರೆದೊಯ್ಯುತ್ತಿದ್ದರೆ ಎನ್ನುವುದು ತನಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡಿದ್ದ. ನ್ಯಾಯಾಲಯವು ಕಳೆದ ಮೇ 10ರಂದು ಉಬೈದ್ ಮತ್ತು ಜಿತೇಂದ್ರರನ್ನು ಖುಲಾಸೆಗೊಳಿಸಿದೆ.

ಪ್ರಕರಣವೇನೋ ಬಿದ್ದುಹೋಗಿದೆ, ಆದರೆ ಪಟ್ಟಣದಲ್ಲಿ ಸಮುದಾಯಗಳ ನಡುವಿನ ಸಂಬಂಧಕ್ಕೆ ಉಂಟಾಗಿದ್ದ ಹಾನಿಯನ್ನು ಸರಿಪರಿಡಿಸುವುದು ಕಷ್ಟಕರವಾಗಿತ್ತು. ಈ ಘಟನೆಯಿಂದಾಗಿ ಪಟ್ಟಣದಲ್ಲಿಯ 40 ಮುಸ್ಲಿಮ್ ಕುಟುಂಬಗಳು ಪಲಾಯನ ಮಾಡಿದ್ದವು. ಈ ಪೈಕಿ ಹೆಚ್ಚಿನವರು ಹಲವಾರು ತಿಂಗಳುಗಳ ಬಳಿಕ ಪುರೋಲಾಕ್ಕೆ ಮರಳಿದರೆ ಏಳೆಂಟು ಕುಟುಂಬಗಳು ಮತ್ತೆಂದೂ ಇಲ್ಲಿಗೆ ವಾಪಸಾಗಿಲ್ಲ.

‘ಎಲ್ಲವೂ ಮೊದಲಿದ್ದಂತೆಯೇ ಕಂಡು ಬರುತ್ತಿದೆ, ಆದರೆ ಒಳಗಿಂದೊಳಗೇ ನಮ್ಮ ಬಗ್ಗೆ ಹೊಸ ತಿರಸ್ಕಾರದ ಭಾವನೆಯನ್ನು ಅನುಭವಿಸುತ್ತಿದ್ದೇವೆ. ಕಳೆದ ವರ್ಷ ಅಷ್ಟೆಲ್ಲ ಆಗುತ್ತಿದ್ದಾಗ ‘ಇತರರು ನಮ್ಮನ್ನೇಕೆ ನಿಂದಿಸುತ್ತಿದ್ದಾರೆ ’ಎಂದು ನನ್ನ ಮಕ್ಕಳು ನನ್ನನ್ನು ಪ್ರಶ್ನಿಸಿದ್ದರು. ಆಗ ಅದಕ್ಕೆ ನನ್ನ ಬಳಿ ಉತ್ತರವಿರಲಿಲ್ಲ, ಈಗಲೂ ಇಲ್ಲ. ಅಂದು ಪ್ರಚೋದನೆಯ ಕಿಡಿ ಹೊತ್ತಿಸಿದವರೇ ಈಗ ನನ್ನ ಅಂಗಡಿಗೆ ಬಂದು ಏನೂ ಆಗದಿದ್ದವರಂತೆ ವರ್ತಿಸುತ್ತಿದ್ದಾರೆ. ನಾವೂ ಎಲ್ಲವನ್ನು ಮರೆತು ಮುಂದಕ್ಕೆ ಸಾಗುತ್ತಿರುವಂತೆ ವರ್ತಿಸುತ್ತಿದ್ದೇವೆ ’ ಎಂದು ಮುಸ್ಲಿಮ್ ವ್ಯಾಪಾರಿಯೋರ್ವರು ಹೇಳಿದರು.

ಕಳೆದ ವರ್ಷ ಅಶಾಂತಿಯ ಸಮಯದಲ್ಲಿ ಪ್ರತಿಭಟನಾಕಾರರು ಅವರ ಅಂಗಡಿಯ ನಾಮಫಲಕವನ್ನು ಕಿತ್ತು ಹಾಕಿದ್ದರು. ಅವರು ಇಂದಿಗೂ ಅದನ್ನು ಮರುಸ್ಥಾಪಿಸಿಲ್ಲ.

‘ನನ್ನ ಕುಟುಂಬ 1978ರಲ್ಲಿ ಬಿಜ್ನೂರಿನಿಂದ ಇಲ್ಲಿಗೆ ಬಂದಿದ್ದು, ನಾವು ಮೂರು ತಲೆಮಾರುಗಳಿಂದಲೂ ಈ ಊರಿನಲ್ಲಿ ವಾಸವಾಗಿದ್ದೇವೆ. ನಾನು ಹುಟ್ಟಿದ್ದು ಇಲ್ಲಿಯೇ. ಸ್ಥಳೀಯ ಸರಸ್ವತಿ ಶಿಶು ಮಂದಿರದಲ್ಲಿ ಓದಿದ್ದೆ. ಹೆಚ್ಚಿನ ನನ್ನ ಸ್ನೇಹಿತರು ಹಿಂದೂಗಳಾಗಿದ್ದಾರೆ. ಹೊರಗಿನವನು ಎಂದು ನನಗೆಂದೂ ಅನ್ನಿಸಿರಲಿಲ್ಲ. ಆದರೆ ಒಂದೇ ಒಂದು ಘಟನೆ, ಅದೂ ಸಂಪೂರ್ಣವಾಗಿ ಸುಳ್ಳು ಘಟನೆ ನಮ್ಮ ಬದುಕುಗಳನ್ನೇ ಬದಲಿಸಿಬಿಟ್ಟಿದೆ. ಇನ್ನೂ ಇಲ್ಲಿಯೇ ವಾಸವಿರಬೇಕು ಎಂದು ನನಗೆ ಅನ್ನಿಸುತ್ತಿಲ್ಲ, ಉಸಿರುಗಟ್ಟಿದಂತಾಗಿದೆ. ಪಟ್ಟಣವನ್ನು ತೊರೆಯಲು ನಾನು ಯೋಚಿಸುತ್ತಿದ್ದೇನೆ’ ಎಂದರು.

ಪಟ್ಟಣದಲ್ಲಿಯ ಇನ್ನೂ ಹಲವು ಮುಸ್ಲಿಮ್ ವ್ಯಾಪಾರಿಗಳೂ ಇದೇ ತೊಳಲಾಟದಲ್ಲಿದ್ದಾರೆ.

ಸುಳ್ಳು ಆರೋಪ ಉಬೈದ್ಗೆ ಕಳಂಕವುಂಟು ಮಾಡಿದ್ದು ಮಾತ್ರವಲ್ಲ, ಜಾಮೀನು ಸಿಗುವ ಮುನ್ನ ಎರಡು ತಿಂಗಳು ಜೈಲಿನಲ್ಲಿ ಕೊಳೆಯುವಂತೆ ಮಾಡಿತ್ತು. ಆತ ವರ್ಷಗಳಿಂದಲೂ ಬೆಳೆಸಿಕೊಂಡು ಬಂದಿದ್ದ ವ್ಯಾಪಾರಕ್ಕೆ ಮಂಗಳ ಹಾಡಿತ್ತು. ಪುರೋಲಾದಲ್ಲಿ ವರ್ಷಗಳಿಂದಲೂ ಬದುಕು ಕಟ್ಟಿಕೊಂಡಿದ್ದ ಆತನ ಇಡೀ ಕುಟುಂಬ ಊರನ್ನೇ ತೊರೆದಿದೆ. ಈ ಸುಳ್ಳು ಪ್ರಕರಣ ಆತನ ಬದುಕನ್ನೇ ನಾಶಗೊಳಿಸಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಉಬೈದ್ನ ಸೋದರಸಂಬಂಧಿ ಅಝೀಂ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News