ಚಲಿಸುತ್ತಿದ್ದ ಶಾಲಾ ವಾಹನದಿಂದ ಕೆಳಗೆ ಬಿದ್ದ ಬಾಲಕಿಯರು: ಚಾಲಕನ ಬಂಧನ

Update: 2024-06-22 06:50 GMT

Screengrab: X/@sirajnoorani

ವಡೋದರ: ಚಲಿಸುತ್ತಿರುವ ಶಾಲಾ ವಾಹನದಿಂದ ಇಬ್ಬರು ಶಾಲಾ ಬಾಲಕಿಯರು ಕೆಳಗೆ ಬಿದ್ದಿರುವ ಘಟನೆ ವಡೋದರದ ಮಂಜಲ್ಪುರ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದೆ.

ಈ ಘಟನೆಯು ಬುಧವಾರ ಸುಮಾರು 11.45 ಗಂಟೆಗೆ ನಡೆದಿದೆ ಎಂದು ಹೇಳಲಾಗಿದ್ದು, ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲಾ ವಾಹನವು ಕಿರಿದಾದ ರಸ್ತೆಯಲ್ಲಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. ಆ ಸಿಸಿಟಿವಿ ದೃಶ್ಯಾವಳಿಯ ಸೆರೆಯಿಂದ ವಾಹನವು ನಿರ್ಗಮಿಸುವ ಹೊತ್ತಿಗೆ ದೊಡ್ಡ ಚೀರಾಟವೊಂದು ಕೇಳಿ ಬಂದಿರುವುದನ್ನು ಕೇಳಬಹುದಾಗಿದೆ. ಕೂಡಲೇ ಸ್ಥಳದಲ್ಲಿದ್ದ ಜನರು ಓಡಿ ಬಂದು, ನೆಲಕ್ಕೆ ಬಿದ್ದು ಗಾಯಗೊಂಡಿದ್ದ ಶಾಲಾ ಬಾಲಕಿಯರನ್ನು ರಕ್ಷಿಸಿದ್ದಾರೆ.

ಈ ಘಟನೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಹಲವರು ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಚಾಲಕನ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಅಪಾಯಕ್ಕೀಡಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಚಾಲಕನು ವಾಹನವವನ್ನು ಮುಂದಕ್ಕೆ ಚಲಾಯಿಸುವುದಕ್ಕೂ ಮುನ್ನ ವಾಹನದ ಬಾಗಿಲನ್ನು ಸಮರ್ಪಕವಾಗಿ ಮುಚ್ಚಿರಲಿಲ್ಲ. ಹೀಗಾಗಿ ವಿದ್ಯಾರ್ಥಿನಿಯರು ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಗಾಯಗೊಂಡಿರುವ ಶಾಲಾ ವಿದ್ಯಾರ್ಥಿನಿಯರ ಪೋಷಕರು ನೀಡಿರುವ ದೂರನ್ನು ಆಧರಿಸಿ, ಶಾಲಾ ವಾಹನದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News