ಹರ್ಯಾಣ: ಉನ್ನತ ಪೊಲೀಸ್ ಅಧಿಕಾರಿಗಳು ಹಾಜರಿದ್ದ ಅಪರಾಧ ಪರಿಶೀಲನಾ ಸಭೆಯಲ್ಲಿ ಭಜನೆ; ವ್ಯಾಪಕ ಟೀಕೆ

Update: 2024-10-28 10:30 GMT

Screengrab: X/@mediainfodesk

ಹರ್ಯಾಣ: ಉನ್ನತ ಪೊಲೀಸ್ ಅಧಿಕಾರಿಗಳು ಹಾಜರಿದ್ದ ಅಪರಾಧದ ಕುರಿತ ಪರಿಶೀಲನಾ ಸಭೆಯಲ್ಲಿ ಭಜನೆ ಹಾಡುವ ವೀಡಿಯೊ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಕಾನ್ಫರೆನ್ಸ್ ರೂಂನಲ್ಲಿ ಕುಳಿತು ಭಜನೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕೆಲವು ಅಧಿಕಾರಿಗಳು ಧಾರ್ಮಿಕ ಹಾಡಿಗೆ ಚಪ್ಪಾಳೆ ತಟ್ಟುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ.

ಹರ್ಯಾಣದಲ್ಲಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರವಿದ್ದು, ವಿಡಿಯೋ ವೈರಲ್ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.

“ಇದು ಹರ್ಯಾಣದಲ್ಲಿ ನಡೆದ ಅಪರಾಧ ಪರಿಶೀಲನಾ ಸಭೆಯ ದೃಶ್ಯಗಳು. ಈಗ ಪೊಲೀಸರ ಅಗತ್ಯವೇನು? ಭಜನಾ ತಂಡವೇ ನ್ಯಾಯ ವ್ಯವಸ್ಥೆಯನ್ನು ನಿಭಾಯಿಸಲು ಬಿಡಿ ಎಂದು ಅವಿಶೇಕ್ ಗೋಯಲ್ ಎಂಬವರು ಎಕ್ಸ್ ನಲ್ಲಿ ವಿಡಿಯೋ ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ.

ಇನ್ನೊಬ್ಬ ಎಕ್ಸ್ ಬಳಕೆದಾರರು ಹರ್ಯಾಣ ಪೊಲೀಸರಿಗೆ ಪೋಸ್ಟ್ ಅನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಭಜನೆಗಳನ್ನು ಮನೆಗಳಲ್ಲಿ ಹಾಡಬೇಕು ಹೊರತು ನಿರ್ಣಾಯಕ ಅಪರಾಧ ಪರಿಶೀಲನಾ ಸಭೆಗಳಲ್ಲಿ ಅಲ್ಲ. ಅಪರಾಧ ಪರಿಶೀಲನಾ ಸಭೆಗೂ ಇದಕ್ಕೂ ಏನು ಸಂಬಂಧ? ಭಜನಾ ಕೀರ್ತನೆಯನ್ನು ಮನೆಗಳಲ್ಲಿ ಆಯೋಜಿಸಬೇಕು ಹೊರತು ತೆರಿಗೆದಾರರ ಹಣವನ್ನು ಖರ್ಚು ಮಾಡುವ ಸರ್ಕಾರಿ ಕಚೇರಿಗಳಲ್ಲಿ ಅಲ್ಲ ಎಂದು ಹೇಳಿದ್ದಾರೆ.

"ಬಿಜೆಪಿ ಆಡಳಿತದಲ್ಲಿ ಹರ್ಯಾಣ 'ಹಿಂದೂ ರಾಷ್ಟ್ರ' ಆಗಿ ಮಾರ್ಪಟ್ಟಿದೆಯೇ? ಗೋಮಾಂಸ ಸೇವನೆ ಆರೋಪದಲ್ಲಿ ಗುಂಪು ಹತ್ಯೆ ನಡೆಯುತ್ತಿದೆ. ಪೋಲೀಸರು ಉನ್ನತ ಅಧಿಕಾರಿಗಳ ಸಭೆಗಳಲ್ಲಿ ಭಜನೆ, ಕೀರ್ತನೆ ಆಯೋಜಿಸುತ್ತಾರೆ" ಎಂದು ಇನ್ನೋರ್ವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಟೀಕಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News