ಉತ್ತರ ಪ್ರದೇಶದಲ್ಲಿ ಹಣ್ಣಿನ ಬೆಲೆ ವಿವಾದದ ವೀಡಿಯೋಗೆ ತಪ್ಪಾದ ಕೋಮು ನಿರೂಪಣೆ ನೀಡಲಾಗಿದೆ

Update: 2025-03-28 18:16 IST
Editor : Ismail | Byline : logicallyfacts
ಉತ್ತರ ಪ್ರದೇಶದಲ್ಲಿ ಹಣ್ಣಿನ ಬೆಲೆ ವಿವಾದದ ವೀಡಿಯೋಗೆ ತಪ್ಪಾದ ಕೋಮು ನಿರೂಪಣೆ ನೀಡಲಾಗಿದೆ

ಸಂಭಾಲ್‌ನಲ್ಲಿ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್‌. (ಮೂಲ: ಎಕ್ಸ್, ಲಾಜಿಕಲಿ ಫ್ಯಾಕ್ಟ್ಸ್‌ಗಳಿಂದ ಮಾರ್ಪಡಿಸಲಾಗಿದೆ)

  • whatsapp icon

ತೀರ್ಪು (ತಪ್ಪು)

ವೈರಲ್ ಆಗಿರುವ ಹೇಳಿಕೆ ತಪ್ಪಾಗಿದೆ. ಈ ಘಟನೆ ಎರಡು ಹಿಂದೂ ಗುಂಪುಗಳ ನಡುವಿನ ಹಣ್ಣಿನ ಬೆಲೆಗಳ ವಿವಾದವಾಗಿದ್ದು, ಯಾವುದೇ ಕೋಮು ಅಥವಾ ಧಾರ್ಮಿಕ ದೃಷ್ಟಿಕೋನ ಇದರಲ್ಲಿ ಒಳಗೊಂಡಿಲ್ಲ.

ಹೇಳಿಕೆ ಏನು?

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ರಸ್ತೆಯಲ್ಲಿ ಜನರ ಗುಂಪೊಂದು ಜಗಳವಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿಂದೂ ಯಾತ್ರಿಕರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ.

ಬಳಕೆದಾರರು ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಿಂದಿಯಲ್ಲಿ ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: "ಸಂಭಾಲ್‌ನಲ್ಲಿ ಮಾ ಪೂರ್ಣಗಿರಿ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ ಮಾಡಲಾಗಿದೆ. ಆಹಾರ ಮತ್ತು ಪಾನೀಯಗಳಿಗಾಗಿ ನಿಲ್ಲಿಸಿದ್ದ ಬಸ್‌ನಲ್ಲಿ ಭಜನೆಗಳು ನುಡಿಸುತ್ತಿದ್ದವು. ಜಿಹಾದಿಗಳು ಭಜನೆಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ದೇವಿಯ ಭಕ್ತರನ್ನು ಹೊಡೆದು ಸಾಯಿಸಲಾಯಿತು."

ಇತರ ಆರ್ಕೈವ್ ಮಾಡಿದ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

 ನಾವು ಕಂಡುಕೊಂಡಿದ್ದು ಏನು?

ಈ ಘಟನೆ ಮಾರ್ಚ್ ೨೧, ೨೦೨೫ ರಂದು ಸಂಭಾಲ್‌ನ ಸದರ್ ಕೊತ್ವಾಲಿ ಪ್ರದೇಶದ ಜಂತ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ ಎಂದು ಬಹು ಸುದ್ದಿ ವರದಿಗಳು ದೃಢಪಡಿಸಿವೆ.

ಈ ವರದಿಗಳ ಪ್ರಕಾರ, ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್ ರಸ್ತೆಬದಿಯಲ್ಲಿ ನಿಂತಿತ್ತು, ಏಕೆಂದರೆ ಕೆಲವರು ಹಣ್ಣುಗಳನ್ನು ಖರೀದಿಸಲು ಬಯಸಿದ್ದರು. ಭಕ್ತರು ಮತ್ತು ಹಣ್ಣಿನ ಮಾರಾಟಗಾರರ ನಡುವೆ ಬೆಲೆ ನಿಗದಿಗೆ ಸಂಬಂಧಿಸಿದಂತೆ ವಾಗ್ವಾದ ನಡೆಯಿತು, ಇದು ದೈಹಿಕ ವಾಗ್ವಾದಕ್ಕೆ ಕಾರಣವಾಯಿತು. ಎರಡೂ ಕಡೆಯವರು ಪರಸ್ಪರ ಕೋಲುಗಳಿಂದ ಹೊಡೆಯಲು ಪ್ರಾರಂಭಿಸಿದರು. ಪೊಲೀಸರನ್ನು ಸ್ಥಳಕ್ಕೆ ಕರೆಸಿ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಯಿತು.

ಸಂಭಾಲ್ ಪೊಲೀಸ್ ಸೂಪರಿಂಟೆಂಡೆಂಟ್ ಕೃಷ್ಣ ಬಿಷ್ಣೋಯ್ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಬೆಲೆಗಳ ಬಗ್ಗೆ ವಿವಾದ ಉಂಟಾದಾಗ ಹಣ್ಣು ಖರೀದಿಸಲು ಕೆಲವು ಜನರು ಬಸ್ಸಿನಿಂದ ಇಳಿದಿದ್ದರು ಎಂದು ಹೇಳಿದ್ದಾರೆ. ಮೊದಲು ಹಣ್ಣು ಮಾರಾಟಗಾರ, ಸ್ಥಳೀಯ ನಿವಾಸಿ ಮೇಲೆ ಹಲ್ಲೆ ನಡೆಸಲಾಗಿತ್ತು, ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಪೊಲೀಸರು ಆಗಮಿಸಿ ಭಾಗಿಯಾಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದರು ಎಂದು ಬಿಷ್ಣೋಯ್ ಹೇಳಿದರು.

ಮಾರ್ಚ್ ೨೨, ೨೦೨೫ ರಂದು, ಸಂಭಾಲ್ ಪೊಲೀಸರು ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕುರಿತು ಸ್ಪಷ್ಟೀಕರಣವನ್ನು ಪೋಷ್ಟ್ ಮಾಡಿದ್ದಾರೆ (ಹಿಂದಿಯಿಂದ ಅನುವಾದಿಸಲಾಗಿದೆ): "ಹಣ್ಣುಗಳನ್ನು ಖರೀದಿಸುವಾಗ ಎರಡು ಪಕ್ಷಗಳ ನಡುವೆ ಜಗಳವಾಯಿತು. ಎರಡೂ ಪಕ್ಷಗಳು ಒಂದೇ ಸಮುದಾಯಕ್ಕೆ (ಹಿಂದೂ) ಸೇರಿವೆ. ಎರಡೂ ಕಡೆಯ ಆರು ವ್ಯಕ್ತಿಗಳ ವಿರುದ್ಧ ತಡೆಗಟ್ಟುವ ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದಿನ ಕಾನೂನು ಕ್ರಮ ನಡೆಯುತ್ತಿದೆ."

 ಸಂಭಾಲ್ ಪೊಲೀಸರು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

 ಜಾಗ್ರಣ್ ನ್ಯೂಸ್ ವರದಿಯ ಪ್ರಕಾರ, ಸಂಭಾಲ್ ಕೊತ್ವಾಲಿ ಸ್ಟೇಷನ್ ಹೌಸ್ ಅಧಿಕಾರಿ ಅನುಜ್ ತೋಮರ್, ಬರೇಲಿ ಸರೈ ನಿವಾಸಿಗಳಾದ ನೀರಜ್, ನರೇಶ್ ಮತ್ತು ನಿರಂಜನ್ ಮತ್ತು ನಖಾಸಾ ಪೊಲೀಸ್ ಠಾಣೆ ಪ್ರದೇಶದ ಮಾಂಡ್ಲಿ ಸಂಸಾಪುರದ ನಿವಾಸಿಗಳಾದ ರಾಜು, ಸುರ್ಜೀತ್ ಮತ್ತು ಸಂಜೀವ್ ಅವರು ವಾಗ್ವಾದದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಎಲ್ಲಾ ಆರು ಜನರ ವಿರುದ್ಧ ಶಾಂತಿ ಕದಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಸಂಬಂಧಿತ ಎರಡೂ ಪಕ್ಷಗಳು ಹಿಂದೂ ಸಮುದಾಯಕ್ಕೆ ಸೇರಿದವರು ಮತ್ತು ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ತೋಮರ್ ಲಾಜಿಕಲಿ ಫ್ಯಾಕ್ಟ್ಸ್‌ ಗೆ ದೃಢಪಡಿಸಿದ್ದಾರೆ.

ಪೊಲೀಸ್ ಹೇಳಿಕೆಗಳು ಮತ್ತು ಸ್ಥಳೀಯ ಸುದ್ದಿ ವರದಿಗಳು ಸೇರಿದಂತೆ ಲಭ್ಯವಿರುವ ಪುರಾವೆಗಳು, ವಾಗ್ವಾದದಲ್ಲಿ ಭಾಗಿಯಾಗಿರುವ ಎರಡೂ ಪಕ್ಷಗಳು ಒಂದೇ ಧಾರ್ಮಿಕ ಸಮುದಾಯದವರು ಎಂದು ದೃಢಪಡಿಸುತ್ತವೆ. ವೀಡಿಯೋವನ್ನು ತಪ್ಪಾದ ಕೋಮು ನಿರೂಪಣೆಯೊಂದಿಗೆ ಪ್ರಸಾರ ಮಾಡಲಾಗುತ್ತಿದೆ.

ತೀರ್ಪು

ಸಂಭಾಲ್‌ನಲ್ಲಿ ಹಿಂದೂ ಯಾತ್ರಿಕರ ಮೇಲೆ ಮುಸ್ಲಿಮರು ದಾಳಿ ಮಾಡಿದ್ದಾರೆ ಎಂಬ ಹೇಳಿಕೆ ತಪ್ಪಾಗಿದೆ. ಈ ಘಟನೆ ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದ ಎರಡು ಗುಂಪುಗಳ ನಡುವಿನ ಹಣ್ಣಿನ ಬೆಲೆಗಳ ವಿವಾದದಿಂದ ಹುಟ್ಟಿಕೊಂಡಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ಈ ಲೇಖನವನ್ನು ಮೊದಲು 'logicallyfacts.com' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - logicallyfacts

contributor

Similar News